ಬೆಂಗಳೂರು: ನಿನ್ನೆ ಬೆಂಗಳೂರಿನ ನಗರತ್ಪೇಟೆಯಲ್ಲಿ ನಡೆದ ಯುವಕನ ಮೇಲೆ ಹಲ್ಲೆ ಘಟನೆ ಸಂಬಂಧಪಟ್ಟಂತೆ ಇಂದು ಹನುಮಾನ ಚಾಲೀಸಾ ಮೆರವಣಿಗೆ ನಡೆಸುತ್ತಿದ್ದವರನ್ನು ತಡೆಯಲು ಮುಂದಾದ ಪೊಲೀಸರ ಕ್ರಮವನ್ನು ಮೆರವಣಿಗೆ ಕಾರರು ಆಕ್ಷೇಪ ವ್ಯಕ್ತಪಡಿಸಿ ಪರಿಣಾಮ ಪೊಲೀಸರು ಹಾಗೂ ಮೆರವಣಿಗೆಕಾರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಮೆರವಣಿಗೆಯ ಮುಂಚೂಣಿಯಲ್ಲಿದ್ದ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ಕುಮಾರ್ ಮತ್ತು ಪೊಲೀಸರ ನಡುವೆ ಮಾತುಕತೆ ನಡೆದು ವಿಕೋಪಕ್ಕೆ ಹೋಗಿದೆ. ಒಂದು ಹಂತದಲ್ಲಿ ಪೊಲೀಸರು ಶಾಸಕ ಸುರೇಶ್ಕುಮಾರ್ ಅವರನ್ನು ಎಳೆದಾಡಿದ್ದಾರೆ ಎನ್ನಲಾಗಿದೆ. ಪೊಲೀಸರ ಕ್ರಮವನ್ನು ಖಂಡಿಸಿ ಸುರೇಶ್ ಸ್ಥಳದಲ್ಲಿಯೇ ಧರಣಿ ನಡೆಸಿದ್ದಾರೆ.
ಸುದ್ದಿ ತಿಳಿದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಥಳಕ್ಕೆ ಆಗಮಿಸಿ ಪೊಲೀಸರ ಕ್ರಮವನ್ನು ಖಂಡಿಸಿ ಸ್ಥಳದಲ್ಲಿಯೇ ಧರಣಿ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಶೋಭಾ ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದರು. ಇದೇ ವೇಳೆ ಮೆರವಣಿಗೆಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.