ಹನೂರು: ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳ ಲೀಡ್ ಕೊಡಿಸುವ ಮೂಲಕ ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಎಂದು ಸಾಬೀತಾಗಿದೆ.2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಗೆ ಹನೂರು ವಿಧಾನಸಭಾ ಕ್ಷೇತ್ರದಿಂದಲೇ 37001 ಮತಗಳ ಮುನ್ನಡೆ ದೊರಕಿದೆ.
ಕಳೆದ ಮೂರು ಬಾರಿಯೂ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಆರ್ ಧ್ರುವನಾರಾಯಣ್ ರವರಿಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆಯನ್ನು ನೀಡಿತ್ತು. ಇದೇ ನಿಟ್ಟಿನಲ್ಲಿ ನಾಲ್ಕನೇ ಬಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕಾರ್ಯಕರ್ತರು ಹೆಚ್ಚಿನ ಮತ ನೀಡಿರುವುದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡ ಮಾಜಿ ಶಾಸಕ ಆರ್ ನರೇಂದ್ರರವರಿಗೆ ಶಕ್ತಿ ತುಂಬಿದೆ.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಾಜಿ ಶಾಸಕ ಆರ್ ನರೇಂದ್ರ ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ನೋವನ್ನು ಕ್ಷೇತ್ರದ ಮತದಾರರು 30,000ಕ್ಕೂ ಹೆಚ್ಚು ಮತಗಳನ್ನು ನೀಡಿ ನನ್ನ ಕೈ ಬಲಪಡಿಸುವಂತೆ ಪ್ರಚಾರ ನಡೆಸಿದ್ದರು, ಆದರೆ ಕ್ಷೇತ್ರದ ಕಾರ್ಯಕರ್ತರು ಆರ್ ನರೇಂದ್ರ ರವರ ನಿರೀಕ್ಷೆಗೂ ಮೀರಿ ಬೆಂಬಲ ನೀಡಿರುವುದು ಮತ್ತಷ್ಟು ಹುರುಪು ತುಂಬಿದೆ.
ಸತತ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹನೂರು ಕ್ಷೇತ್ರದ ಮತದಾರರು ಶಕ್ತಿ ತುಂಬಿದ್ದಾರೆ. ಅದರಂತೆ ಈ ಬಾರಿ 37 ಸಾವಿರ ಹೆಚ್ಚು ಮತ ನೀಡಿರುವುದು ಸಂತಸ ತಂದಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಇದೆ ಸಾಕ್ಷಿ.