This is the title of the web page
This is the title of the web page

ಹ್ಯಾಪಿ ಬರ್ತ್​ಡೇ ‘ಡಾರ್ಲಿಂಗ್​’.. ಸಿನಿ ರಂಗದಲ್ಲಿ ದಶಕ ಪೂರೈಸಿದ ಕೃಷ್ಣ

ಇಂದು ಲವ್​ ಮಾಕ್ಟೇಲ್​ ಖ್ಯಾತಿಯ ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೊತೆಗೆ ಸಿನಿ ರಂಗದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ.ಸ್ಯಾಂಡಲ್​ವುಡ್​ನ ಹೆಸರಾಂತ ನಟ ಡಾರ್ಲಿಂಗ್​ ಕೃಷ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1985ರ ಜೂನ್​ 12 ರಂದು ಜನಿಸಿದ ಇವರು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಜೊತೆಗೆ ಸಿನಿ ರಂಗದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ. ಕೃಷ್ಣ ನಟನಾಗಿ ಸ್ಯಾಂಡಲ್​ವುಡ್​ಗೆ ಕಾಲಿರಿಸಿ ಇಂದಿಗೆ ದಶಕವಾಗಿದೆ. ಈ ಶುಭ ಸಂದರ್ಭದಲ್ಲಿ ಪತ್ನಿ ಮಿಲನಾ ನಾಗರಾಜ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳು ನಟನಿಗೆ ಬರ್ತ್​ಡೇ ಶುಭಾಶಯದ ಜೊತೆಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕೃಷ್ಣ ನಂತರದಲ್ಲಿ ‘ಮದರಂಗಿ’ ಸಿನಿಮಾ ಮೂಲಕ ನಾಯಕನಾಗಿ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. 2013 ರಲ್ಲಿ ಬಿಡುಗಡೆಯಾದ ಈ ಚಿತ್ರ ಒಬ್ಬ ಅದ್ಭುತ ನಟನನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿತು. ಆದರೆ ಅವರಿಗೆ ಹಿಟ್​ ತಂದು ಕೊಟ್ಟಿದ್ದು ಮಾತ್ರ ‘ಲವ್​ ಮಾಕ್ಟೇಲ್’​. ಈ ಸಿನಿಮಾವನ್ನು ಜನರು ಕೊಂಚ ಹೆಚ್ಚೇ ಮೆಚ್ಚಿಕೊಂಡಿದ್ದರು. ಅದರ ನಂತರ ಬಂದ ‘ಲವ್​ ಮಾಕ್ಟೇಲ್​ 2’ ಕೂಡ ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿತು. ಈ ಸಿನಿಮಾ ಕೂಡ ಸೂಪರ್​ ಹಿಟ್​ ಆಯಿತು.

ಇನ್ನೂ ಕೆಲ ವರ್ಷಗಳಿಂದ ಡಾರ್ಲಿಂಗ್​ ಕೃಷ್ಣ, ನಟಿ ಮಿಲನಾ ನಾಗರಾಜ್​ ಅವರನ್ನು ಪ್ರೀತಿಸುತ್ತಿದ್ದರು. ಪರಸ್ಪರ ಪ್ರಯಣದಲ್ಲಿದ್ದ ಈ ಜೋಡಿ ‘ಲವ್​ ಮಾಕ್ಟೇಲ್’​ ಹಿಟ್​ ಆದ ಬಳಿಕ ತಮ್ಮ ಲವ್​ ಸ್ಟೋರಿ ಬಹಿರಂಗಪಡಿಸಿದರು. ನಂತರ 2021 ರಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಇಬ್ಬರು ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಲು ಶುರು ಮಾಡಿದರು. ಸಿನಿಮಾದಲ್ಲೂ, ರಿಯಲ್​ ಲೈಫ್​ನಲ್ಲೂ ಇವರಿಬ್ಬರು ಎಲ್ಲರ ನೆಚ್ಚಿನ ಜೋಡಿಯಾದರು.

ಪತಿಗೆ ಮಿಲನಾ ಸ್ಪೆಷಲ್​ ವಿಶ್​: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬಕ್ಕೆ ಪತ್ನಿ ಮಿಲನಾ ನಾಗರಾಜ್​ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. “ಹ್ಯಾಪಿ ಬರ್ತ್​ಡೇ ಡಾರ್ಲಿಂಗ್​. ಒಂದು ಅಸಾಧಾರಣವಾದ ಪಯಣ ಮತ್ತು 10 ವರ್ಷ ಅನ್ನೋದು ಆರಂಭ ಅಷ್ಟೇ. ಯಶಸ್ಸು ಮತ್ತು ಸೋಲನ್ನು ನೀವು ಚೆನ್ನಾಗಿ ನಿಭಾಯಿಸುತ್ತೀರಿ. ನಾನು ಭೇಟಿ ಆದಾಗಿನಿಂದ ಈ 10 ವರ್ಷಗಳಲ್ಲಿ ನೀವು ಅದೇ ರೀತಿ ಇದ್ದೀರಿ. ಪರಿಶ್ರಮದಿಂದ ನೀವು ಲಕ್ಷಾಂತರ ಹೃದಯಗಳನ್ನು ಗೆಲ್ಲುವಂತಾಗಲಿ. ನಿಮ್ಮ ಬದ್ಧತೆ ನಮಗೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಸಿನಿಮಾ ಪಯಣದಲ್ಲಿ ಮತ್ತು ಜೀವನದ ಭಾಗವಾಗಿ ನಾನು ಇರುವುದಕ್ಕೆ ಖುಷಿ ಪಡುತ್ತೇನೆ. ನಿಮ್ಮ ನಿರ್ದೇಶನದ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇವೆ” ಎಂದು ಬರೆದು ಸ್ಪೆಷಲ್​ ವಿಶ್​ ಮಾಡಿದ್ದಾರೆ. ನಟಿ ಹಂಚಿಕೊಂಡಿರುವ ಫೋಟೋದ ಹಿನ್ನೆಲೆಯಲ್ಲಿ ಡಾರ್ಲಿಂಗ್​ ಕೃಷ್ಣ ನಟಿಸಿರುವ ಹಲವು ಸಿನಿಮಾಗಳ ಪೋಸ್ಟರ್​ ಇದೆ.

ಮಿಲನಾ ನಾಗರಾಜ್​ ಹಂಚಿಕೊಂಡಿರುವ ಈ ಪೋಸ್ಟರ್​ಗೆ ಡಾರ್ಲಿಂಗ್​ ಕೃಷ್ಣ ಚಂದವಾಗಿ ಪ್ರತಿಕ್ರಿಯಿಸಿದ್ದಾರೆ. “ಧನ್ಯವಾದಗಳು ಬೇಬು. ತಡವಾಗಿ ರಿಪ್ಲೈ ಮಾಡಿದ್ದಕ್ಕೆ ಕ್ಷಮೆ ಇರಲಿ. ನಾನು ಈಗ ನೋಡಿದೆ. ಲವ್​ ಯೂ” ಎಂದು ಕಮೆಂಟ್​ ಮಾಡಿದ್ದಾರೆ. ಡಾಲಿಂಗ್​ ಕೃಷ್ಣ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ಸಖತ್​ ವೈರಲ್​ ಆಗಿದೆ. ಇದೇ ಪೋಸ್ಟರ್​ ಬಳಸಿಕೊಂಡು ಎಲ್ಲರೂ ನಟನಿಗೆ ವಿಶ್​ ಮಾಡುತ್ತಿದ್ದಾರೆ.

‘ಶುಗರ್​ ಫ್ಯಾಕ್ಟರಿ’ ಪೋಸ್ಟರ್​ ಔಟ್​: ಕೃಷ್ಣನ ಮುಂದಿನ ಸಿನಿಮಾ ‘ಶುಗರ್​ ಫ್ಯಾಕ್ಟರಿ’ ಚಿತ್ರತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪೋಸ್ಟರ್​ ಕಲರ್​ಫುಲ್​ ಆಗಿದ್ದು, ಕೃಷ್ಣನ ಲುಕ್​ ಕೂಡ ಸೂಪರ್​ ಆಗಿದೆ. ಸಿನಿಮಾಗೆ ದೀಪಕ್​ ಅರಸ್​ ನಿರ್ದೇಶನದ ಜೊತೆಗೆ ಕಥೆಯನ್ನು ಕೂಡ ಬರೆದಿದ್ದಾರೆ. ಅದ್ವಿತಿ ಶೆಟ್ಟಿ, ಸೊನಾಲ್​ ಮೊಂಥೆರೋ ಮತ್ತು ಶಿಲ್ಪಾ ಶೆಟ್ಟಿ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣಗೆ ನಾಯಕಿಯಾಗಿದ್ದಾರೆ. ಇನ್ನೂ ಕೃಷ್ಣ ಅವರ ಬಹುನಿರೀಕ್ಷಿತ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಟೈಟಲ್​ ಟ್ರ್ಯಾಕ್​ ಕೂಡ ಇಂದು ಬಿಡುಗಡೆಯಾಗಲಿದೆ.