This is the title of the web page
This is the title of the web page

ಪರಿಸರ ಸ್ನೇಹಿ ಇಂಧನ ಬಳಕೆಗೆ ಹೊಸ ವೇಗ: ಹರ್‍ದೀಪ್ ಸಿಂಗ್ ಪುರಿ

ಬೆಂಗಳೂರು: ಕೇಂದ್ರ ಇಂಧನ ಸಚಿವ ಹರ್‍ದೀಪ್ ಸಿಂಗ್ ಪುರಿ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದರು. ವಿವಿಧ ದೇಶಗಳ ಇಂಧನ ಸಚಿವರು, ಹಲವು ಜಾಗತಿಕ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಸರ ಸ್ನೇಹಿ ಇಂಧನ ಬಳಕೆಗೆ ಹೊಸ ವೇಗ ನೀಡುವ ಪ್ರಯತ್ನ ಇದು ಎಂದು ಸಚಿವರು ಹೇಳಿದರು. ಅಮೃತ ಕಾಲ ಮತ್ತು ವಸುಧೈವ ಕುಟುಂಬಕಂ ಆಶಯಗಳನ್ನು ಮತ್ತೊಮ್ಮೆ ವಿವರಿಸಿದರು.

ಭಾರತದಲ್ಲಿ ಎಲ್ಲರಿಗೂ ಕೈಗೆಡುಕುವ ದರದಲ್ಲಿ ಇಂಧನ ಒದಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 2030ರ ಒಳಗೆ ಭಾರತದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪರಿಶ್ರಮ ಹಾಕುತ್ತಿದೆ. ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರ ಸ್ನೇಹಿ ಇಂಧನಕ್ಕೆ ನಾವು ಆದ್ಯತೆ ನೀಡಿದ್ದೇವೆ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ರಾಜಿಯಾಗುತ್ತಿಲ್ಲ ಎಂದು ಪುರಿ ವಿವರಿಸಿದರು.

ಸೂರ್ಯನ ಬೆಳಕಿನಿಂದ ಅಡುಗೆ ಮಾಡುವ ಸೋಲಾರ್ ಕುಕ್‍ಟಾಪ್‍ಗಳ ಬಳಕೆಗೆ ಇಂದು ಚಾಲನೆ ಸಿಗಲಿದೆ. ಈ ತಂತ್ರಜ್ಞಾನವನ್ನು ಭಾರತ ಹಂಚಿಕೊಳ್ಳಲಿದೆ. ಇದನ್ನು ಯಥಾವತ್ತಾಗಿ ಏಷ್ಯಾದ ಇತರ ದೇಶಗಳೂ ಬಳಸಬಹುದಾಗಿದೆ. ತ್ಯಾಜ್ಯ ಪೆಟ್ ಬಾಟಲಿಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಪರಿಸರ ಮಾಲಿನ್ಯ ತಗ್ಗಿಸಲು ಇದು ನೆರವಾಗಲಿದೆ ಎಂದರು.ಜೈವಿಕ ಇಂಧನಕ್ಕೆ ಭಾರತ ಸರ್ಕಾರವು ಉತ್ತೇಜನ ನೀಡುತ್ತಿದೆ.

ಕೆಲವು ಪೆಟ್ರೋಲ್ ಪಂಪ್‍ಗಳಲ್ಲಿ ಜೈವಿಕ ಇಂಧನ ಬೆರೆತ ಪೆಟ್ರೋಲಿಯಂ ಉತ್ಪನ್ನಗಳು ಲಭ್ಯವಾಗಲಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ನಿರ್ಮಾಣವಾದ ಪರಿಸರ ಸ್ನೇಹಿ ವಾಹನಗಳಿಗೂ ಪ್ರಧಾನಿ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಇಂಧನ ಸಚಿವರು ಹೇಳಿದರು. ಪರಿಸರ ಮಾಲಿನ್ಯ ತಗ್ಗಿಸುವುದನ್ನು ನಮ್ಮ ಸರ್ಕಾರ ಆದ್ಯತೆಯಾಗಿ ಪರಿಗಣಿಸಿದೆ. ಹಸಿರು ಇಂಧನದ ಬಗ್ಗೆ ಬಜೆಟ್ ಭಾಷಣದಲ್ಲಿಯೂ ಪ್ರಸ್ತಾಪಿಸಲಾಗಿತ್ತು.

ದೊಡ್ಡ ಮೊತ್ತದ ಅನುದಾನವನ್ನು ಈ ಕ್ಷೇತ್ರಕ್ಕೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಆಶಯ ಸಾಕಾರಗೊಳಿಸಲು ನಾವು ಶ್ರಮಿಸಬೇಕಿದೆ. ಅದು ನಮ್ಮ ಆದ್ಯತೆಯಾಗಬೇಕು ಎಂದು ಸಚಿವ ಹರ್‍ದೀಪ್ ಸಿಂಗ್ ಪುರಿ ತಮ್ಮ ಸ್ವಾಗತ ಭಾಷಣ ಮುಗಿಸಿದರು.