ನವದೆಹಲಿ: ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ತಂಡಕ್ಕೆ ಕರೆತರಲು ಪ್ರಯತ್ನ ನಡೆಸುತ್ತಿದೆ.
ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಹಾಗೂ ಆಲ್ರೌಂಡರ್ ಆಗಿರುವ ಹಾರ್ದಿಕ್ ಅವರು ಐಪಿಎಲ್ನ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ಗೆ ಮರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಆದರೆ, ಈ ಬೆಳವಣಿಗೆಯ ಬಗ್ಗೆ ಸ್ಪಷ್ಟತೆ ನೀಡಲು ಮುಂಬೈ ಇಂಡಿಯನ್ಸ್ ನಿರಾಕರಿಸಿದ್ದರಿಂದ, ಐಪಿಎಲ್ `ಟ್ರೇಡಿಂಗ್’ ವಿಂಡೋ ಕೊನೆಯಾಗುವ ದಿನವಾದ ಇದೇ 26ರವರೆಗೆ ಕಾಯಬೇಕಾಗುತ್ತದೆ.
ಪಾಂಡ್ಯ ಈ ಹಿಂದೆ ಏಳು ಆವೃತ್ತಿಗಳಲ್ಲಿ ಮುಂಬೈ ತಂಡದ ಪರ ಆಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ಸೇರಿಕೊಂಡ ನಂತರ ಅವರು ತಂಡವನ್ನು ಚೊಚ್ಚಲ ಋತುವಿನಲ್ಲಿ ಚಾಂಪಿಯನ್’ ಪಟ್ಟಕ್ಕೇರಿಸಿದ್ದರು. ನಂತರ ಆವೃತ್ತಿಯಲ್ಲಿ ತಂಡ ರನ್ನರ್ ಅಪ್’ ಸ್ಥಾನ ಪಡೆದುಕೊಂಡಿತ್ತು. ‘ಹಾರ್ದಿಕ್ ಮುಂಬೈ ಇಂಡಿಯನ್ಸ್’ ತಂಡಕ್ಕೆ ಹೋಗುವ ಬಗ್ಗೆ ಮಾತುಕತೆಗಳು ನಡೆದಿವೆ.
ಆದರೆ ಈ ಸಮಯದಲ್ಲಿ ಒಪ್ಪಂದಕ್ಕೆ ಇನ್ನೂ ಸಹಿ ಹಾಕದ ಕಾರಣ ಹೆಚ್ಚಿನದನ್ನು ಖಚಿತಪಡಿಸಲಾಗುವುದಿಲ್ಲ’ ಎಂದು ಗುಜರಾತ್ ತಂಡದ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ಐಪಿಎಲ್ ಮೂಲವೊಂದು ತಿಳಿಸಿದೆ.