ದಾವಣಗೆರೆ: ಹರಿಹರ ನಗರಸಭೆಯ 2024-25 ನೇ ಸಾಲಿನ ಆಯವ್ಯಯವನ್ನು ರೂ.56,78,11,000 ರೂ.ಗಳಿಗೆ ಮಂಡಿಸಿ ರೂ.4,79,000 ಗಳ ಉಳಿತಾಯ, ಅಭಿವೃದ್ದಿ ಪೂರಕ ಬಜೆಟ್ನ್ನು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಗುರುವಾರ ಮಂಡಿಸುವ ಮೂಲಕ ಅನುಮೋದನೆ ಪಡೆದರು.
2024-25 ನೇ ಸಾಲಿನಲ್ಲಿ ನಗರಸಭೆಯ ಒಟ್ಟು ಆದಾಯ ಕೇಂದ್ರ, ರಾಜ್ಯ ಸರ್ಕಾರದಿಂದ ಬರುವ ಅನುದಾನ, ನಗರಸಭೆ ಆಸ್ತಿ ತೆರಿಗೆ, ನೀರಿನ ತೆರಿಗೆ, ಬಾಡಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ, ಜಾಹಿರಾತು ಶುಲ್ಕದ ಸೇರಿ ಎಲ್ಲಾ ಮೂಲಗಳಿಂದ ರೂ.56,78,11,000 ಆದಾಯ ನಿರೀಕ್ಷೆ ಮಾಡಲಾಗಿದೆ. ಈ ಸಾಲಿಗೆ ರೂ.56,73,32,000 ಗಳಿಗೆ ವಿವಿಧ ಯೋಜನೆಗಳು ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಖರ್ಚು ತೋರಿಸಲಾಗಿದ್ದು 2024-25 ನೇ ಸಾಲಿಗೆ 4.79 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಬಜೆಟ್ ಮುಖ್ಯಾಂಶಗಳು; ಅಭಿವೃದ್ದಿ ಪೂರಕ ಬಜೆಟ್ ಇದಾಗಿದ್ದು ಈ ನಿಟ್ಟಿನಲ್ಲಿ ಅಭಿವೃದ್ದಿಗೆ ವಿನೂತನ ಸ್ಪರ್ಶ ನೀಡಿ ಯೋಜನೆ ರೂಪಿಸಲಾಗಿದೆ. ಮತ್ತು ಹರಿಹರಕ್ಕೆ ಆಧುನಿಕ ಲೇಪನ, ಪ್ರಕೃತಿ ಸೌಂದರ್ಯಕ್ಕೆ ವಿಶೇಷ ಒತ್ತು, ಪ್ರವಾಸೋದ್ಯಮ, ಭವಿಷ್ಯದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ.
ಲಕ್ಷ ವೃಕ್ಷೋತ್ಸವವನ್ನು ನಗರಸಭೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದು ಇದಕ್ಕಾಗಿ ನಗರದಲ್ಲಿರುವ ರಸ್ತೆ, ಬಡಾವಣೆಗಳಲ್ಲಿ ಹಾಗೂ ಪಾರ್ಕ್ ಅಭಿವೃದ್ದಿಪಡಿಸುವ ಮೂಲಕ ಗಿಡಗಳನ್ನು ನೆಟ್ಟು ನಗರದ ಸೌಂದರ್ಯ ಹೆಚ್ಚಿಸುವುದು, ಅಂತರ್ಜಲ ಹೆಚ್ಚಳಕ್ಕೆ ಅಮೃತ ಸರೋವರ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಮಟ್ಟ ಕಾಯ್ದುಕೊಂಡು ಬರಗಾಲದಲ್ಲಿಯೂ ಜನರಿಗೆ ನೀರಿನ ಕೊರತೆಯಾಗದಿರಲೆಂದು ಮತ್ತು ನಗರದ ಜನರಿಗೆ ಬೇಸಿಗೆಯಲ್ಲಿ ನಿರಂತರ ಕುಡಿಯುವ ನೀರು ಒದಗಿಸಲು ರಾಜನಹಳ್ಳಿ ಸಮೀಪ ಎರಡು ಎಕರೆ ಜಮೀನಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ಕುಡಿಯುವ ನೀರು ಸಂಗ್ರಹಕ್ಕಾಗಿ ಭವಿಷ್ಯದ ಯೋಜನೆ ರೂಪಿಸಲಾಗಿದೆ.
ನಗರದಲ್ಲಿನ 10 ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ್ ಕೇಂದ್ರಗಳನ್ನಾಗಿ ನಿರ್ಮಾಣ ಮಾಡುವ ಮೂಲಕ ಕಲಿಕೆಯಲ್ಲಿ ಆಧುನಿಕತೆಯ ಸ್ಪರ್ಶ ನೀಡಲಾಗುತ್ತದೆ. ಎಲ್ಲಾ ವಸ್ತುಗಳು ಒಂದೆಡೆ ಸಿಗುವಂತೆ ಮಾಡಲು ಅಮೃತ ಸ್ಟೋರ್ ಮತ್ತು ಇತಿಹಾಸ ಪ್ರಶಿದ್ದ ಹರಿಹರೇಶ್ವರ ದೇವಸ್ಥಾನ ಹಾಗೂ ತುಂಗಭದ್ರಾ ನದಿಯ ತೀರವನ್ನು ಅಭಿವೃದ್ದಿಪಡಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ಆಯವ್ಯಯದಲ್ಲಿ ಯೋಜಿಸಲಾಗಿದೆ.
ಜೊತೆಗೆ ಹರಿಹರ ಸಂಪರ್ಕ ಕೇಂದ್ರತ ಸ್ಥಳವಾಗಿದ್ದು ಶಿವಮೊಗ್ಗ, ಹೊಸಪೇಟೆ, ಕಲಬುರಗಿ, ಧಾರವಾಡ, ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರು ಮತ್ತು ಪ್ರವಾಸಿಗರ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಒಂದೇ ಸೂರಿನಡಿ ತರೆಹವಾರಿ ತಿನಿಸುಗಳು ಲಭ್ಯವಾಗಬೇಕೆಂದು ಫುಡ್ ಕೋರ್ಟ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ಬಜೆಟ್ ಮಂಡನೆಯಲ್ಲಿ ಶಾಸಕರಾದ ಬಿ.ಪಿ.ಹರೀಶ್ ಭಾಗವಹಿಸಿದ್ದರು. ಇದೊಂದು ಅಭಿವೃದ್ದಿ ಪೂರಕ ಭವಿಷ್ಯದ ಬಜೆಟ್ ಆಗಿದ್ದು ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದರು. ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್, ಪೌರಾಯುಕ್ತ ಬಸವರಾಜ ಐಗೂರು ಮತ್ತು ಎಲ್ಲಾ 31 ಜನ ನಗರಸಭಾ ಸದಸ್ಯರು, 5 ಜನರು ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.