ದೊಡ್ಡಬಳ್ಳಾಪುರ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ರೈತರ ಬದುಕು ಹಸನಾಗಿಲ್ಲ. ರೈತರು ಬೆಳೆದಿರುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೇ ಹೋರಾಟದ ಹಾದಿ ತುಳಿಯಬೇಕಾದ ಸನ್ನಿವೇಶ ಸೃಷ್ಟಿಯಾಗಿರುವುದು ಬೇಸರ ಸಂಗತಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ಗೌಡ ಹೇಳಿದರು.
ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನ ಸಭಾಂಗಣದಲ್ಲಿ ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ಕೃಷಿಕರಿಗೆ ಅನ್ಯಾಯವಾಗಿದೆ.
ಯಾವುದೇ ಪಕ್ಷಗಳನ್ನು ದೂರುವುದಿಲ್ಲ. ಆದರೆ ಅನೇಕ ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಪರವಾಗಿ ಕಾನೂನು ತರಲು ವಿಫಲವಾಗಿವೆ. ರಾಜ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ, ಕೈಗಾರೀಕರಣದಿಂದ ಕೃಷಿಕರ ಸಂಖ್ಯೆ ಕಡಿಮೆ ಆಗಿದೆ. ರೈತರ ಅಳಿದುಳಿದ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆ ಹೆಸರಲ್ಲಿ ಕಸಿದುಕೊಂಡರೆ ರೈತರ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತಾಗುತ್ತದೆ.
ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ರೈತರು 35 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರೈತರ ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಸಾಸಲು ಹೋಬಳಿಯಲ್ಲಿ ರೈತರೊಬ್ಬರ ರೇಷ್ಮೆ ಮನೆಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ. ಆ ರೈತನಿಗೆ ಸರಕಾರ ಸ್ಪಂದಿಸಿಲ್ಲ ಎಂದು ದೂರಿದರು.
ಬೆಂಗಳೂರು ಗ್ರಾಮಾಂತರ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಡಾ. ಕೆ.ಎನ್. ಅನುರಾಧ ಮಾತನಾಡಿ, ರೈತರ ಕೃಷಿ ಸಾಧನೆ, ಶ್ರಮದ ಮುಂದೆ ನಮ್ಮಸನ್ಮಾನಗಳೆಲ್ಲ ಚಿಕ್ಕದು. ಇಂದು ಬರ ಸೇರಿದಂತೆ ನಾನಾ ಕಾರಣಗಳಿಂದ ರೈತರು ಕೃಷಿ ಕಾರ್ಯದಿಂದ ದೂರು ಉಳಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಕೂಡ ಸಾಕಷ್ಟು ಶ್ರಮವಹಿಸಿ ತಮ್ಮ ತೋಟ ಹಾಗೂ ಹೊಲದಲ್ಲಿ ದುಡಿದು ಕೃಷಿಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆ ವಿಚಾರ ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ಗಾಯತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್ ರೈತರಿಗೆ ಹಲವಾರು ರೇಷ್ಮೆ ಇಲಾಖೆಯಲ್ಲಿ ದೊರೆಯುವ ಇಲಾಖೆ ಸೌಲಭ್ಯಗಳ ಬಗ್ಗೆ ವಿವರಿಸಿದರು. ಮಾರುಕಟ್ಟೆ, ಪಾರದರ್ಶಕ ಧಾರಣೆ ತೂಕ, ಕಳೆದ ಐದಾರು ವರ್ಷಗಳಿಂದ ಮಾರುಕಟ್ಟೆ ಸುಧಾರಣೆ ಆಗಿದೆ. ಚಳಿ ಇರುವ ಪ್ರದೇಶಗಳಲ್ಲಿ ರೇಷ್ಮೆಗೆ ಬಹಳ ಬೇಡಿಕೆ ಇದೆ. ಉತ್ಪಾದನೆ ಕಡಿಮೆ ಇದೆ. ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ರೇಷ್ಮೆ ಬೆಳೆ ಬಗ್ಗೆ ಮಾಹಿತಿ ನೀಡಲು ಇಲಾಖೆ ಅಧಿಕಾರಿಗಳು ಲಭ್ಯವಿದ್ದಾರೆ ಎಂದು ಮಾಹಿತಿ ನೀಡಿದರು.