ತುಮಕೂರು: ಕಾಡುಗಳ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗಿದೆ. ಇದರಿಂದ ಅನೇಕ ಪ್ರಾಣಿ ಹಾಗೂ ಸಸ್ಯ ಸಂಕುಲಗಳು ಕಣ್ಮರೆಯಾಗುತ್ತಿವೆ. ಹಸಿರಿದ್ದೆಡೆ ಮಾನವನ ಸರ್ವಾಂಗಿಣ ಪ್ರಗತಿ ಕಾಣಬಹುದಾಗಿದ್ದು, ಈ ನಿಟ್ಟಿನಲ್ಲಿ ಸಸ್ಯಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಜಿಲ್ಲೆಯ ಹುಲಿಕುಂಟೆ ಗ್ರಾಮಪಂಚಾಯತಿಯ ಗೌರಗನಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ಗುಟ್ಟೆ ಆವರಣದಲ್ಲಿ ಸಸಿಗಳಿಗೆ ನೀರೆರೆಯುವುದರ ಮೂಲಕ `ಹಸಿರು ಗ್ರಾಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಾವ ದೇಶದಲ್ಲಿ ಅರಣ್ಯದ ವಿಸ್ತೀರ್ಣ ಶೇ.50ಕ್ಕಿಂತ ಹೆಚ್ಚಿರುತ್ತದೋ ಅಂತಹ ದೇಶಗಳಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ ಸಮೃದ್ಧಿಯನ್ನು ಕಾಣಬಹುದಾಗಿದೆ.
ದಟ್ಟವಾದ ಅರಣ್ಯವನ್ನು ಹೊಂದಿದಂತಹ ದಕ್ಷಿಣ ಅಮೇರಿಕಾದಂತಹ ಪ್ರದೇಶಗಳಲ್ಲಿ ಕಾಡು ನಾಶದಿಂದ ವಾತಾವರಣದಲ್ಲಿ ವೈಪ್ಯರೀತ್ಯ ಕಂಡು ಬರುತ್ತಿದೆ, ಭಾರತ ದೇಶವು ಶೇ.21ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯು ಶೇ 19.20 ಇದ್ದು, ರಾಷ್ಟ್ರೀಯ ಸರಾಸರಿಗಿಂತ ರಾಜ್ಯದ ಅರಣ್ಯ ವಿಸ್ತೀರ್ಣ ಕಡಿಮೆ ಇರುತ್ತದೆ.
ಆದರಿಂದ ರಾಜ್ಯದಲ್ಲಿ ಹಸರೀಕರಣ ಹೆಚ್ಚಿಸುವ ಮೂಲ ಉದ್ದೇಶದಿಂದ `ಹಸಿರು ಗ್ರಾಮ’ ಕಾರ್ಯಕ್ರಮ ರೂಪಸಿಲಾಗಿದೆ, ಇಂದು ಶ್ರೀರಂಗನಾಥ ಸ್ವಾಮಿ ಗುಟ್ಟೆ ಆವರಣದಲ್ಲಿ 600 ಸಸಿಗಳನ್ನು ನೇಡಲಾಗಿದ್ದು. ಜಿಲ್ಲೆಯಾದ್ಯಂತ ಈ ದಿನ ಏಕಕಾಲದಲ್ಲಿ 50,000 ಸಸಿಗಳನ್ನು ನೆಡಲಾಗುತ್ತಿದೆ ಎಂದರಲ್ಲದೆ, ಸಸಿಗಳನ್ನು ನೆಡುವುದಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ಸಸಿಗಳ ಪ್ರಗತಿಯ ಆಡಿಟ್ ವರದಿಯನ್ನು ಪಡೆಯುವಂತಹ ಪರಿಪೂರ್ಣ ಯೋಜನೆ ರೂಪಿಸಿರುವ ಸಿಇಓ ಜಿ.ಪ್ರಭು ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಕಳೆದ ವರ್ಷ ನಡೆದ ವಿಶ್ವ ಪರಿಸರ ದಿನ ಆಚರಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ನೀಡಿದ ಸೂಚನೆಯನ್ವಯ ಜಿಲ್ಲೆಯಾದ್ಯಂತ 3.58ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿ, ಜಿಲ್ಲೆಯ ಪ್ರಮುಖ 17 ಸಸ್ಯ ಕ್ಷೇತ್ರಗಳಲ್ಲಿ ಒಂದು ವರ್ಷದಿಂದ ಬೆಳೆಸಿದ 47 ಜಾತಿಯ ವಿವಿಧ ಪ್ರಬೇಧಗಳನ್ನು ಬೆಳೆಸಿ, ಹಸಿರು ಗ್ರಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯ ಶಾಲಾ ಹಾಗೂ ಸರ್ಕಾರಿ ಕಚೇರಿಗಳ ಆವರಣ, ರಸ್ತೆ ಬದಿ ಮೊದಲಾದ ಪ್ರದೇಶಗಳಲ್ಲಿ ಬೆಳೆಸಲು ಪ್ರತಿ ಗ್ರಾಮಪಂಚಾಯತಿಗೆ 1500 ಸಸಿಗಳನ್ನು ನೀಡಲಾಗಿದೆ ಎಂದರು.ಸಾಮಾಜಿಕ ಅರಣ್ಯ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ಮಾತನಾಡಿ, ಗಿಡಗಳನ್ನು ಉಳಿಸಿ-ಬೆಳೆಸಿ ಎಂಬ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಸಚಿವರಿಂದ ಮುಂಗಾರು ಬಿತ್ತನೆಗೆ ಚಾಲನೆ: ಕೊರಟಗೆರೆ ತಾಲ್ಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಗೊಲ್ಲದೇವನಹಳ್ಳಿಯ ರೈತ ಚೆನ್ನಪ್ಪ ಅವರ ಜಮೀನಿನಲ್ಲಿ ಸಚಿವರು ಟ್ರಾಕ್ಟರ್ ಚಾಲನೆ ಮಾಡಿ, ತೊಗರಿ ಬಿಆರ್ಜಿ-05 ಸೊರಗು ನಿರೋಧಕ ಬೀಜವನ್ನು ಬಿತ್ತನೆ ಮಾಡುವ ಮೂಲಕ ಮುಂಗಾರು ಬಿತ್ತನೆಗೆ ಚಾಲನೆ ನೀಡಿದರು.
ಕೊರಟಗೆರೆ ತಾಲ್ಲೂಕಿನಲ್ಲಿ 32,000 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 340 ಹೆ.ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿರುತ್ತದೆ. ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಡಿ ಇಲ್ಲಿಯವರೆಗೂ 891.80 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, 2624 ಕ್ವಿಂ. ಬಿತ್ತನೆ ಬೀಜ ವಿತರಣೆ ಗುರಿ ಹೊಂದಲಾಗಿದೆ. 2023-24ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಾಲ್ಲೂಕಿನ 6572 ರೈತರು ನೋಂದಾಯಿಸಿದ್ದು, 1164.30ಲಕ್ಷಗಳ ವಿಮಾ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಹಸಿರು ಗ್ರಾಮ: ಪ್ರತಿ ಗ್ರಾಮಪಂಚಾಯತಿಯಲ್ಲಿ ಕನಿಷ್ಟ 1,000 ಸಸಿಗಳನ್ನು ಹಸಿರು ಗ್ರಾಮ ಅಭಿಯಾನದ ಮೂಲಕ ನೆಟ್ಟು ಮುಂದಿನ 3 ವರ್ಷಗಳ ಕಾಲ ಸಂರಕ್ಷಿಸಿ ಶೇ.100ರಷ್ಟು ಗಿಡಗಳನ್ನು ಉಳಿಸಿ ಬೆಳೆಸಿ ಆ ಮೂಲಕ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸಿ ಹಸಿರೀಕರಣ ಕಾರ್ಯಕ್ರಮಗಳಿಗೆ ಸ್ವಯಂಪ್ರೇರಿತರಾಗಿ ಎಲ್ಲರೂ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದೇ ಹಸಿರು ಗ್ರಾಮ ಅಭಿಯಾನದ ಮೂಲ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಮುಖಂಡರುಗಳಾದ ಚಂದ್ರಶೇಖರ್ಗೌಡ, ಅರಕೆರೆ ಶಂಕರ್, ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೊಲಿಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.