ಮಾಗಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಟೊಯೋಟಾ ಕಿರ್ಲೋಸ್ಕರ್ ಅವರು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮನವಿ ಮಾಡಲಾಗಿದೆ ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿನೀಡಿ ಅಲ್ಲಿನ ಒಳಚರಂಡಿ ಸಮಸ್ಯೆ, ಸ್ವಚ್ಚತೆ ವೈದ್ಯಕೀಯ ಸೇವೆಗಳ ಕುರಿತು ಪರಿಶೀಲಿಸಿ ಮಾತನಾಡಿದ ಅವರು ಟೊಯೋಟಾ ಕಂಪನಿಯವರು ದತ್ತು ಪಡೆದು ಈ ಆಸ್ಪತ್ರೆಯನ್ನು ಆಧುನಿಕ ಸ್ಪರ್ಶ ನೀಡಿ ನಿರ್ಮಿಸುವ ಮೂಲಕ ಮೇಲ್ದರ್ಜೆಗೇರಿಸಲು ಮನವಿ ಮಾಡಲಾಗಿದೆ.
ಜೊತೆಗೆ ಬೆಂಗಳೂರಿನ ರಾಜರಾಜೇಶ್ವರಿ ಅಥವಾ ಸಪ್ತಗಿರಿ ಆಸ್ಪತ್ರೆಯವರು ಈ ಆಸ್ಪತ್ರೆಯನ್ನು ದತ್ತು ಪಡೆದು ಬಡವರ್ಗದ ಜನರಿಗೆ ಸೂಕ್ತ ಚಿಕಿತ್ಸೆ ಕೊಡಬೇಕೆಂದು ಮನವಿ ಮಾಡಲಾಗಿದೆ.ಬಹಳ ವರ್ಷಗಳ ಬೇಡಿಕೆಯಾದ ತಾಯಿಮಗು ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಲ್ಲಿ ಚರ್ಚಿಸಲಾಗಿದೆ ಎಂದರು.
ಈ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಒಳಚರಂಡಿ ಸಮಸ್ಯೆಯಿದ್ದು ಅದನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ದುರಸ್ಥಿಗೆ ಎಂಜಿನಿಯರ್ ಗೆ ಸ್ಥಳ ಪರಿಶೀಲನೆಗೆ ಕರೆದಿದ್ದೇನೆ.ಯೋಜನೆ ರೂಪಿಸಿ ಕ್ರಮ ವಹಿಸಲಾಗುವುದು.ವೈದ್ಯಕೀಯ ಪದವಿ ಪಡೆದವರೆಲ್ಲರೂ ನಗರ ಪ್ರದೇಶದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲು ಇಚ್ಚಿಸುತ್ತಿರುವುದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ಉದ್ಭವಿಸುತ್ತಿದೆ.
ನಗರ ಪ್ರದೇಶದಲ್ಲಿ ಗಂಟೆ ಲೆಕ್ಕದಲ್ಲಿ ಚಿಕಿತ್ಸೆ ನೀಡಿ ವೇತನ ಪಡೆಯುವ ಪ್ರವೃತ್ತಿ ಬಿಡಬೇಕು. ಸರ್ಕಾರ ವೈದ್ಯರ ನೇಮಕಾತಿ ಮಾಡಲು ಅಗತ್ಯ ಕ್ರಮ ಕೈಗೊಂಡರೂ ಯಾರೂ ಕೂಡಾ ಗ್ರಾಮೀಣ ಭಾಗಕ್ಕೆ ಬರಲು ಇಚ್ಚಿಸುತ್ತಿಲ್ಲ.ಈ ಆಸ್ಪತ್ರೆಯಲ್ಲಿ ಮಕ್ಕಳ ಡಾಕ್ಟರ್ ಹಾಗೂ ಶಸ್ತ್ರಚಿಕಿತ್ಸೆ ವೈದ್ಯರ ಕೊರತೆಯಿದ್ದು ಅದನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್, ಡಾ.ಯಶ್ವಂತ್, ಡಾ.ಜ್ಞಾನಪ್ರಕಾಶ್, ಆಶಾ, ಗುಣಶೇಖರ್, ಮುಖಂಡ ಬಿ.ಟಿ.ನಾರಾಯಣ್ ಮತ್ತಿತರಿದ್ದರು.