ಮಾಗಡಿ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಪ್ರತಿನಿಧಿಗಳಾದ ನಾವುಗಳು ಸಾರ್ವಜನಿಕ ವಲಯದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಕುದೂರು ಗ್ರಾಪಂ ಆವರಣದಲ್ಲಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಕುದೂರು ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳ ವಿರುದ್ದ ಗರಂ ಆದ ಅವರು ನೀವುಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ಜಿಲ್ಲಾಧಿಕಾರಿಗಳಿಗೆ ರಿಪೋರ್ಟ್ ಮಾಡಬೇಕಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಇಷ್ಠವಿಲ್ಲವಾದರೆ ನಿಮಗಿಷ್ಠ ಬಂದ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ಇಲ್ಲಿದ್ದ ಮೇಲೆ ನಿಮ್ಮ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡದೇ ನಿಮಗೆ ಬೇರೆ ದಾರಿಯೇ ಇಲ್ಲ ಎಂದು ಹರಿಹಾಯ್ದರು.
ಜನಸ್ಪಂದನ ಕಾರ್ಯಕ್ರಮ ಮಾಡುವುದು ಜನರ ಸಂಕಷ್ಟ ಕೇಳಲು ಆದರೆ ಅಧಿಕಾರಿಗಳು ಈ ಹಿಂದಿನ ಮಾಹಿತಿಯನ್ನು ತೆಗೆದುಕೊಂಡು ಬಾರದೇ ನೆಂಟರು ಮನೆಗೆ ಬಂದಂತೆ ಬರುತ್ತೀರಾ? ನಾವು ಜನಸ್ಪಂದನ ಸಭೆ ನಡೆಸುವಾಗ ರೈತಾಪಿ ವರ್ಗ ಸಾಮಾನ್ಯ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ. ಆಗ ಮೇಲಧಿಕಾರಿಗಳ ಸಭೆಗೆ ಹೋಗಿದ್ದೇವೆ ಎಂದು ಸಬೂಬು ಹೇಳುವಂತಿಲ್ಲ.ನಮ್ಮ ಸಭೆಗಳು ಎಂದರೆ ಸ್ಥಳೀಯ ಸಭೆಗಳಿಗೆ ಮೊದಲ ಪ್ರಾಧಾನ್ಯತೆ ನೀಡಬೇಕು. ಮುಖ್ಯಮಂತ್ರಿಗಳೇ ನಿಮ್ಮನ್ನು ಸಭೆಗೆ ಕರೆದರೂ ಹೋಗುವಂತಿಲ್ಲ ಎಂದು ಬಾಲಕೃಷ್ಣ ತಾಕೀತು ಮಾಡಿದರು.
ಕಳೆದ ಐದು ವರ್ಷಗಳಲ್ಲಿ ಯಾವುದೇ ಜನಸ್ಪಂದನ ಸಭೆಗಳು ನಡೆಯದೇ ಇರುವುದು ಇದಕ್ಕೆ ಮೂಲ ಕಾರಣವಾಗಿದೆ. ಇದರಿಂದ ತಮ್ಮ ಕಚೇರಿಯಲ್ಲಿಯೇ ಕುಳಿತು ಕಾಲ ಕಳೆದಿರುವ ಅಧಿಕಾರಿಗಳು ನಮ್ಮ ಅವಧಿಯಲ್ಲಿ ಬೇಜವಾಬ್ದಾರಿ ಕೆಲಸ ಮಾಡಲು ಅವಕಾಶವಿಲ್ಲ.ನಾವು ಸಭೆಗಳನ್ನು ನಡೆಸುವುದು ಜನರಿಗೆ ಅನುಕೂಲವಾಗಲೆಂದೇ ಹೊರತು ಸುಖಾಸುಮ್ಮನೆ ಕಾಲಹರಣ ಮಾಡಿದರೆ ಅಂತಹ ಅಧಿಕಾರಿಗಳಿಗೆ ತಕ್ಕುದಾದ ಪಾಠ ಕಲಿಸಬೇಕಾಗುತ್ತದೆ.
ನಮ್ಮ ತಾಲ್ಲೂಕಿನಲ್ಲಿಯೇ ಸಮಸ್ಯೆಗಳು ತಾಂಡವವಾಡುತ್ತಿರುವಾಗ ಎಡಿಎಲ್ಆರ್ ಅವರನ್ನು ಇನ್ನೊಂದು ತಾಲ್ಲೂಕಿಗೆ ನಿಯೋಜನೆ ಮಾಡಿರುವುದು ಸರಿಯಲ್ಲ.ನನಗೆ ನಮ್ಮ ತಾಲ್ಲೂಕಿನ ಸಮಸ್ಯೆಯೇ ಮುಖ್ಯವಾಗಿದ್ದು ಇನ್ನೊಂದು ತಾಲ್ಲೂಕಿನ ಉದ್ದಾರ ಮಾಡುವ ಅವಶ್ಯಕತೆ ಇಲ್ಲ.ನಿಯೋಜನೆ ಮಾಡುವಾಗ ನನ್ನ ಗಮನಕ್ಕೆ ತರಬೇಕು ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಎಡಿಎಲ್ಆರ್ ಅವರಿಗೆ ನಮ್ಮ ತಾಲ್ಲೂಕಿನ ಸಮಸ್ಯೆಯ ಕುರಿತು ಕೆಲಸ ಮಾಡಲಿ ಬಾಲಕೃಷ್ಣ ತಿಳಿಸಿದರು.
ಗ್ರಾಪಂ ಅದ್ಯಕ್ಷೆ ಕುಸುಮಾ, ಉಪಾದ್ಯಕ್ಷೆ ರಮ್ಯಜ್ಯೋತಿ, ಸದಸ್ಯರಾದ ಬಿಂದು ಲೋಕೇಶ್, ಬಾಲರಾಜು, ಹನುಮಂತಪ್ಪ, ನಿರ್ಮಲಾ, ಸಂದ್ಯ, ಜಯರಾಮ್, ಪಿ.ಡಿ.ಒ.ಪುರುಷೋತ್ತಮ್, ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.