ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬರುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲವೆಂದು ಸಚಿವ ಡಾ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದ ಎಸ್ಸಿ, ಎಸ್ಟಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಗೆ ಸಿಎಂ ಆದರು ಎಂದು ವಿವರಿಸಿದರು.
ಆದರೆ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್, ನಾನು ಪಾಲಿಸಿ ಮೇಕಿಂಗ್ ಸ್ಥಾನದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀವು ನಾಯಕರನ್ನು ಫಾಲೋ ಮಾಡುತ್ತಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರು ಯಾಕೆ ಸಿಎಂ ಆದರು? ರಾಜ್ಯದಲ್ಲಿ ಒಗ್ಗಟಾಗಿ ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ.
ಮತ ನಮ್ಮದಿದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ ಎಂದು ಮಹದೇವಪ್ಪ ಬೇಸರದಿಂದ ಹೇಳಿದರು.ಡಾ. ಜಿ ಪರಮೇಶ್ವರ್, ಖರ್ಗೆ ಅವರಾಗಲಿ, ನಾನಾಗಲಿ ನೀತಿ ರೂಪಿಸುವ ಜಾಗದಲ್ಲಿಲ್ಲ. ನಾವು ಸಿಎಂ ಆಗಲಿಲ್ಲ. ಅಂಬೇಡ್ಕರ್ ಬಳಿಕ ಮತ್ತೊಬ್ಬ ದಲಿತ ನಾಯಕ ಸಿಗಲಿಲ್ಲ.
ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ಆದರೂ ನಮ್ಮ ಪ್ರಭಾವ ಬಳಿಸಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ, ಮುಂಬಡ್ತಿ ಮೀಸಲಾತಿ ಸೇರಿದಂತೆ ಕೆಲ ಐತಿಹಾಸಿಕ ತೀರ್ಮಾನ ಮಾಡಿಸಿದ್ದೇವೆ. ಇದು ಇವತ್ತಿನ ದೇಶದ ರಾಜಕೀಯ ಸನ್ನಿವೇಶ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.