ಬೆಂಗಳೂರು: ಕೇಂದ್ರದ ನೂತನ ಎನ್ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಇಂದು ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿರುವ ಅವರು, ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದು, ವಿಧಾನಸೌಧಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ರಾಜೀನಾಮೆ ನೀಡಿದ ನಂತರ ತಮ್ಮ ಲೋಕಸಭಾ ಕ್ಷೇತ್ರ ಮಂಡ್ಯಕ್ಕೆ ಭೇಟಿ ನೀಡಲು ತೆರಳಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಕುಮಾರಸ್ವಾಮಿ, ಸಂಸದರ ಕಚೇರಿ ಉದ್ಘಾಟಿಸಲಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿ ಉದ್ಘಾಟನೆಗೆ ಬರುತ್ತಿರುವ ಕುಮಾರಸ್ವಾಮಿ ಸ್ವಾಗತಕ್ಕೆ ನಿಡಘಟ್ಟ ಗ್ರಾಮದಿಂದ ಮಂಡ್ಯವರೆಗೂ ತಯಾರಿ ನಡೆದಿದೆ. ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಅದ್ಧೂರಿ ಸ್ವಾಗತ ದೊರೆಯಲಿದೆ. ಮಂಡ್ಯ ಜಿಲ್ಲಾ ಗಡಿಯಿಂದ ಹೆಚ್ಡಿಕೆ ಅದ್ಧೂರಿ ಸ್ವಾಗತಕ್ಕೆ ಮಂಡ್ಯ ಜಿಲ್ಲಾ ಜೆಡಿಎಸ್ ಘಟಕ ಸಿದ್ಧತೆ ನಡೆಸಿದೆ.