ಚಿಕ್ಕಬಳ್ಳಾಪುರ: ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ರಾಜ್ಯದ ಪ್ರತಿ ಗ್ರಾಮದಲ್ಲಿಯೂ ಯುವ ಶಕ್ತಿ ಸಂಘಗಳನ್ನು ಸ್ಥಾಪಿಸಿ ಆರ್ಥಿಕ ನೆರವು ನೀಡುವ ನೂತನ ಯೋಜನೆ ರಾಜ್ಯ ಸರ್ಕಾರದಿಂದ ಮೊದಲ ಬಾರಿಗೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಮಂಚನಬಲೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಯುವಕರಿಗಾಗಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಪ್ರತಿ ಗ್ರಾಮದಲ್ಲಿಯೂ ಯುವಕ ಸಂಘಗಳನ್ನು ರಚಿಸಿ, 5 ಲಕ್ಷ ನೆರವು ಸಹಕಾರದ ಕಾರ್ಯಕ್ರಮ ದೇಶದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು, ಪ್ರತಿ ಗ್ರಾಮದಲ್ಲಿಯೂ ಯುವಕ ಸಂಘಗಳನ್ನು ಸ್ಥಾಪನೆ ಮಾಡಿದರೆ, ಆರ್ಥಿಕ ಸಹಕಾರ ಸರ್ಕಾರದಿಂದ ನೀಡಲಾಗುವುದು ಎಂದರು.
330 ನಿವೇಶನ, 105 ಮನೆ ಮಂಜೂರು ಮಂಚನಬಲೆ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 330 ಕುಟುಂಬಗಳು ನಿವೇಶನ ರಹಿತರಿದ್ದು, ಇವರೆಲ್ಲರಿಗೂ ಉಚಿತವಾಗಿ ನಿವೇಶನ ನೀಡಲಾಗುವುದು. ಇದರ ಮೌಲ್ಯ ಅಂದಾಜು 33 ಕೋಟಿ ಇದ್ದು, ಇವರೆಲ್ಲರೂ ಸ್ವಂತ ಮನೆಗಳ ನಿರ್ಮಾಣ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ. ಜೊತೆಗೆ 105 ಮನೆಗಳು ಈ ಗ್ರಾಪಂಗೆ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಆದೇಶಪತ್ರಗಳನ್ನು ವಿತರಿಸಲಾಗುವುದು ಎಂದರು.
ಈ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 435 ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ಕೆಲಸವಾಗಿದೆ. ಅಲ್ಲದೆ 55 ಲಕ್ಷ ವೆಚ್ಚದಲ್ಲಿ ಮಂಚನಬಲೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಜಿಲ್ಲಾ ಕೇಂದ್ರಕ್ಕೆ ಅತೀ ಸಮೀಪದಲ್ಲಿರುವ ಈ ಗ್ರಾಮವನ್ನು ಮುಂದಿನ ದಿನಗಳಲ್ಲಿ ನಗರದ ಮಾದರಿಯಲ್ಲಿ ಬಿವೃದ್ಧಿ ಪಡಿಸುವ ಸಂಕಲ್ಪ ಹೊಂದಿರುವುದಾಗಿ ಅವರು ಹೇಳಿದರು.
ಅಭಿವೃದ್ಧಿಯಲ್ಲಿ ಜಾತಿ, ಪಕ್ಷ ಬೇಧವಿಲ್ಲ ಅಭಿವೃದ್ಧಿ ವಿಚಾರದಲ್ಲಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಕ್ರಮ ವಹಿಸಲಾಗಿದೆ. ಮನೆ, ನಿವೇಶನ ವಿತರಣೆಯಲ್ಲಿ ಯಾವುದೇ ಜಾತಿ, ಪಕ್ಷವನ್ನು ಪರಿಗಣಿಸದೆ ಅರ್ಹ ಫಲಾನುಭವಿಗಳನ್ನು ಗುರ್ತಿಸಲಾಗಿದೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸದೆ ದೂರ ಉಳಿದಿರುವ ಮಹಿಳೆಯರಿಗೂ ಸಮಾಧಾನಕರ ಬಹುಮಾನ ವಿತರಿಸಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲಿಯೇ ಮನೆ ಮನೆಗೆ ಬಹುಮಾನಗಳನ್ನು ಸ್ಥಳೀಯ ಮುಖಂಡರು ತಲುಪಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನಪರ ಆಡಳಿತವನ್ನು ನೀಡುತ್ತಿವೆ. ವಿದ್ಯಾನಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ, ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ನೆರವು ನೀಡುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಎಲ್ಲ ರೀತಿಯಲ್ಲಿಯೂ ಅಬಿವೃದ್ಧಿ ಹೊಂದುವಂತೆ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ, ಮಂಚನಬಲೆ ಗ್ರಾಪಂ ಅಧ್ಯಕ್ಷೆ ಗಾಯಿತ್ರಿ ಸಂದೀಪ್, ಉಪಾಧ್ಯಕ್ಷ ಶ್ರೀಧರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ನಂಜಪ್ಪ, ಲಕ್ಷ್ಮಣ್, ಗಾಯಿತ್ರಮ್ಮ, ಮಧು, ಗ್ರಾಪಂ ಸದಸ್ಯ ರಾಜಣ್ಣ, ವೆಂಕಟ್, ಶ್ರೀನಿವಾಸ್, ಅಂಜಿ, ನೇತ್ರಾವತಿ, ಚಂದ್ರಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು
Leave a Review