This is the title of the web page
This is the title of the web page

ಕ್ರೀಡೆಗಳಿಂದ ಆರೋಗ್ಯ ವೃದ್ಧಿ: ಕೆ.ವಿ.ನಾಗರಾಜ್

ಚಿಕ್ಕಬಳ್ಳಾಪುರ: ಒತ್ತಡದ ಬದುಕಿನಿಂದ ಬಿಡಿಗಡೆ ಪಡೆಯಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ ಅಧ್ಯಕ್ಷ ಕೆ.ವಿ.ನಾಗರಾಜ್ ಅವರು ತಿಳಿಸಿದರು.

ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಯುವಸ ಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿಕ್ಕಬಳ್ಳಾಪುರ ಶಾಖೆಯ ಸಹಯೋಗದಲ್ಲಿ ನಡೆದ 2022-23ನೇ ಸಾಲಿನ ಕ್ರೀಡಾ ಕೂಡ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಿಗೆ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರಿ ನೌಕರಿ ಎಂದರೆ ಕಚೇರಿಗಳಲ್ಲಿ ಕುಳಿತು ಸಾರ್ವಜನಿಕರ ಕೆಲಸ ಮಾಡುವುದಾಗಿರುತ್ತದೆ.ಇದರಿಂದಾಗಿ ದೇಹಕ್ಕೆ ಹೆಚ್ಚಿನ ವ್ಯಾಯಾಮ ದೊರೆಯುವುದಿಲ್ಲ. ಮನಸ್ಸಿಗೂ ಕೂಡ ಹೆಚ್ಚಿನ ಒತ್ತಡ ಬೀಳುತ್ತದೆ.ನಿಮ್ಮ ಬಳಿ ನೆರವು ಬೇಡಿ ಬಂದಿರುವ ಜನರು ತಮ್ಮ ಕೆಲಸ ಸಕಾಲದಲ್ಲಿ ಆಗದೆ ಇದ್ದಾಗ ಹೆಚ್ಚಿನ ಒತ್ತಡ ಹಾಕುವುದುಂಟು. ಇಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕ ಆರೋಗ್ಯ ಬೇಕಾಗುತ್ತದೆ. ಇದು ಸುಲಭವಾಗಿ ದೊರೆಯುವ ಮಾರ್ಗವೆಂದರೆ ಅದು ಕ್ರೀಡೆಯಾಗಿದೆ. ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗಿಯಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಜೊತೆಗೆ ದಿನನಿತ್ಯ ಯಾವುದಾದರು ಒಂದು ಕ್ರೀಡೆ, ನಡಿಗೆ (ವಾಕಿಂಗ್) , ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕ್ರೀಡಾ ಸ್ಪೂರ್ತಿಯಿರಲಿ: ಆಟೋಟಗಳಲ್ಲಿ ಭಾಗಿಯಾಗುವುದು ಕೂಡ ಉತ್ತಮ ಹವ್ಯಾಸಗಳಲ್ಲಿ ಒಂದಾಗಿದೆ. ಯಾವುದೇ ಕ್ರೀಡೆಯೇ ಆಗಿರಲಿ ಸೋಲು ಗೆಲುವು ಸಹಜವೆಂದು ತಿಳಿದು ಕ್ರೀಡಾ ಮನೋಭಾವದ ವರ್ತನೆ ಪ್ರದರ್ಶಿಸುವುದು ಮುಖ್ಯ.ಕೆಲವೊಮ್ಮೆ ತೀರ್ಪುಗಾರರು ನಿಮ್ಮ ನಿಲುವಿಗಿಂತ ವ್ಯತಿರಿಕ್ತವಾದ ತೀರ್ಮಾನ ತೆಗೆದುಕೊಳ್ಳುವುದುಂಟು. ಅಂತಹ ಸಂದರ್ಭದಲ್ಲಿ ಕೂಡ ಗೊಂದಲ ಮನಸ್ತಾಪಕ್ಕೆ ಅವಕಾಶವಿಲ್ಲದಂತೆ ಸಹೋದರ ಸಹೋದರಿಯರ ಹಾಗೆ ನಡೆದುಕೊಂಡು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು. ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ನಾತನಾಡಿ ಸರಕಾರಿ ನೌಕರರು ಸಾರ್ವಜನಿಕರ ಸೇವೆಯಲ್ಲಿರುವ ಕಾರಣ ಒತ್ತಡದ ಬದುಕು ಸಹಜ.ಅದರಿಂದ ಬಿಡುಗಡೆ ಪಡೆದು ಲವಲವಿಕೆಯಿಂದ ಕರ್ತವ್ಯ ನಿರ್ವಹಿಸಲು ಮನೋ ದೈಹಿಕ ಕ್ಷಮತೆ ಅಗತ್ಯ. ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ಆರೋಗ್ಯ ವೃದ್ದಿಸುವುದಲ್ಲದೆ ಮನಸ್ಸು ಕೂಡ ಉಲ್ಲಸಿತವಾಗಿ ಉತ್ತಮ ರೀತಿಯಲ್ಲಿ ನೌಕರಿ ಮಾಡಲು ಸಹಾಯಕವಾಗಲಿದೆ ಎಂದರು.

ಮನುಷ್ಯನಿಗೆ ಜೀವನದಲ್ಲಿ ಸಂಪತ್ತು ಗಳಿಸುವುದು ಮುಖ್ಯವಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಂಡರೆ ನಾವು ಬಯಸಿದ್ದೆಲ್ಲವನ್ನು ಪಡೆದುಕೊಂಡು ಸಂತೋಷದಿಂದ ನೌಕರಿಯಲ್ಲಿ ಮುಂದುವರೆಯಲು ಸಾಧ್ಯ.ಜಿಲ್ಲೆಯ 6ತಾಲೂಕಿನಿಂದ ಆಗಮಿಸಿರುವ ಎಲ್ಲಾ ಇಲಾಖೆಗಳ ಕ್ರೀಡಾಪಟುಗಳು ತಾವು ಆಯ್ಕೆ ಮಾಡಿಕೊಂಡಿರುವ ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನ ಪಡೆದುಕೊಳ್ಳಿ.ಜೊತೆಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿನಿಧಿಸುವ ಭಾಗ್ಯ ನಿಮ್ಮದಾಗಲಿ ಎಂದು ಶುಭ ಕೋರಿ, ಕ್ರೀಡಾಕೂಟ ಸಾಂಗವಾಗಿ ನಡೆಯುವಂತೆ ಬೇಕಾದ ಸಕಲ ವ್ಯವಸ್ಥೆ ಮಾಡಿರುವ ಜಿಲ್ಲಾ ಸರಕಾರಿ ನೌಕರರ ಸಂಘ ಅದರ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ 6 ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಜರಿದ್ದರು.

ವೇದಿಕೆಯಲ್ಲಿ ಡಿಡಿಪಿಐ ಜಯರಾಮ ರೆಡ್ಡಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ. ಹರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಜಯ್‍ಕುಮಾರ್ ಸೇರಿದಂತೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಎಲ್ಲ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊ ಡಿದ್ದರು.ಗುಂಪು ಕ್ರೀಡೆ, ಅತ್ಲೆಟಿಕ್ಸ್ ಸೇರಿದಂತೆ ಆಟೋಟ ಸ್ಪರ್ಧೆಗಳು ಯೋಜಿತ ರೀತಿಯಲ್ಲಿ ಜರುಗಿದವು. ನೌಕರರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.