ಕೆ.ಆರ್.ಪೇಟೆ: ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳದ ನಮ್ಮ ಸರ್ಕಾರಿ ಅಧಿಕಾರಿಗಳು ಅವಘಡ ಸಂಭವಿಸಿದ ಬಳಿಕ ಪರಿಹಾರದ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ, ಇಂದು ಜನತೆ ಎಚ್ಚೆತ್ತುಕೊಂಡಿದ್ದಾರೆ.
ಇಂತಿಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಸುಮ್ಮನೆ ಬಿಡುವ ಮಾತೇ ಇಲ್ಲ.ಇದಕ್ಕೆ ನಿದರ್ಶನವೆಂಬಂತೆ ಮಾಕವಳ್ಳಿ ಬಳಿಯ ವಡ್ಡರಹಳ್ಳಿ ಗ್ರಾಮದ ಹೇಮಾವತಿ ಎಡದಂಡೆ ನಾಲೆ ಸೇತುವೆ ಮೇಲೆ ತಡೆಗೋಡೆಯಿಲ್ಲದೆ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವಂತಿದೆ.
ನಾಲೆ ತುಂಬಿ ಹರಿಯುತ್ತಿದ್ದು, ಇದೇ ನಾಲೆಯ ಸೇತುವೆ ಮೇಲೆ ರೈತರು ನಿತ್ಯ ಸಂಚರಿಸುತ್ತಾರೆ. ಎತ್ತಿನಗಾಡಿಗಳಲ್ಲಿ ಕಬ್ಬು ಭತ್ತ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ಸಾಗಿಸುವುದು ವಾಡಿಕೆ. ಗದ್ದೆ ಬಯಲು ಹಾಗೂ ವಡ್ಡರಹಳ್ಳಿ ಸಂಪರ್ಕಿಸುವ ಈ ನಾಲೆ ಸೇತುವೆಯ ತಡೆಗೋಡೆ ಮಾಯವಾಗಿದ್ದು, ಸಂಚರಿಸುವಾಗ ಸ್ವಲ್ಪ ಎಚ್ಚರಿಕೆ ತಪ್ಪಿದರೂ ನೀರುಪಾಲಾಗುವುದು ನಿಶ್ಚಿತ. ಗದ್ದೆ ಬಯಲಿನಲ್ಲಿ ಸುಮಾರು 80 ರಿಂದ 90 ಎಕರೆ ಜಮೀನುಗಳಿಗೆ ಹೋಗಿ ಬರಲು ಇರುವ ಏಕೈಕ ಸೇತುವೆ ಇದು.
ಹೊಲಗದ್ದೆಗಳಿಗೆ ನಿತ್ಯ ಹೋಗಿ ಬರುವ ರೈತರು ಮಹಿಳೆಯರು ಮಕ್ಕಳು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಹಸುಕರುಗಳು ಹೋಗುವಾಗ ಇತ್ತ ನುಸುಳದಂತೆ ಜಾಗ್ರತೆಯಿಂದ ನೊಡಿಕೊಳ್ಳಬೇಕಾಗಿದೆ. ರಾತ್ರಿವೇಳೆಯಲ್ಲಿ ತಡೆಗೋಡೆಯಿಲ್ಲದಿರುವುದರಿಂದ ವಾಹನ ಸವಾರರು ಯಾವುದೇ ಕ್ಷಣದಲ್ಲಿ ಅಪಾಯಕ್ಕೆ ಸಿಲುಕಬಹುದು.
ಇದೆಲ್ಲ ತಿಳಿದಿದ್ದರೂ ಹೇಮಾವತಿ ಎಡದಂಡೆ ಕಾಲುವೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಕೃಷಿಪಾತ್ತಿನಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರಾದ ವಡ್ಡರಹಳ್ಳಿ ಮಹಾದೇವೇಗೌಡ ರವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಈ ನಾಲೆಗೆ ತಡೆಗೋಡೆ ನಿರ್ಮಿಸಿ ಮುಂದಾಗುವ ಅಪಾಯ ತಪ್ಪಿಸಬೇಕು.
ಇಲ್ಲದಿದ್ದರೆ ಮುಂದಾ ಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆಂದು ವಡ್ಡರಹಳ್ಳಿ ಮಾಕ ವಳ್ಳಿ ಕರೋಟಿ ಹೆಗ್ಗಡಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಮಂಜು, ಮೋಹನ್ ಕುಮಾರ್, ರತ್ನಮ್ಮ, ಅರುಣಾ, ಚನ್ನಕೇಶವ, ಮುಂತಾದವರು ಇದ್ದರು.