ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದೊಡನೆ ಆಸ್ಟ್ರೇಲಿಯಾಗೆ ಹಾರಿರುವ ಭಾರತ ತಂಡ ಇದೀಗ ಕಾಂಗರೂಗಳ ವಿರುದ್ಧ ಏಕದಿನ ಸರಣಿಯನ್ನಾಡಲು
ಸಜ್ಜಾಗಿದೆ. ಟಿ೨೦ ಮಾದರಿಯಲ್ಲಿ ನಡೆದ ಏಷ್ಯಾ ಕಪ್ ಗೆಲುವು, ವಿಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲೂ ಕ್ಲೀನ್ ಸ್ವೀಪ್ ಸಾಧನೆಯಿಂದಾಗಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡಕ್ಕೆ ಇದೀಗ ಮಿಚೆಲ್ ಮಾರ್ಶ್ ನೇತೃತ್ವದ ಆಸ್ಟ್ರೇಲಿಯಾ ತಂಡ ಹೇಗೆ ಸವಾಲಾಗಬಲ್ಲುದು ಎಂಬುದು
ಕುತೂಹಲದ ಸಂಗತಿಯಾಗಿದೆ.ಇದೇವೇಳೆ ಶುಭಮನ್ ಗಿಲ್ ನೇತೃತ್ವದ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ವಿಚಾರದಲ್ಲಿ ಅನೇಕ ಲೆಕ್ಕಾಚಾರಗಳು ನಡೆಯುತ್ತಿವೆ. ಪರ್ತ್ ನಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರು ಪ್ರಥಮ ಪ್ರಾಶಸ್ತ್ಯದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ.
ಅವರೊಂದಿಗೆ ವೇಗಿ ಪ್ರಸಿದ್ಧ ಕೃಷ್ಣ ಅವರಿಗೂ ಸ್ಥಾನ ಸಿಗುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫೆಬ್ರವರಿ- ಮಾರ್ಚ್ ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡುತ್ತಿದೆ. ಮಾತ್ರವಲ್ಲದೆ ಟಿ೨೦ ಮತ್ತು ಟೆಸ್ಟ್ ಗಳಿಂದ ನಿವೃತ್ತರಾಗಿರುವ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಸಹ ಹೆಚ್ಚೂಕಮ್ಮಿ ಅರ್ಧ ವರ್ಷದ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಂತದಲ್ಲಿ ತಂಡದ ಮ್ಯಾನೇಜ್ ಮೆಂಟ್ ಸಹ ಪ್ಲೇಯಿಂಗ್ ಇಲೆವೆನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದೆ. ಈ ಹಿಂದೆ ಏಕದಿನ ಮಾದರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ೨೦೨೫ ಮತ್ತು ಟಿ೨೦ ಮಾದರಿಯಲ್ಲಿ ನಡೆದ ಏಷ್ಯಾ ಕಪ್ ೨೦೨೫ ಟೂರ್ನಿಗಳು ನಡೆದ ದುಬೈನ ಅಂತಾರಾಷ್ಟ್ರೀಯಾ ಕ್ರೀಡಾಂಗಣ ಸ್ಪಿನ್ ಬೌಲಿಂಗ್ ಗೆ ಸಹಕಾರಿಯಾಗಿದ್ದ ಹಿನ್ನೆಲೆಯಲ್ಲಿ ಭಾರತ ತಂಡ ಏಕೈಕ ತಜ್ಞ ವೇಗದ ಬೌಲರ್ ಜೊತೆಗೆ ಕಣಕ್ಕಿಳಿದಿತ್ತು. ಎರಡನೇ ಮಧ್ಯಮ ವೇಗಿಯಾಗಿ ಹಾರ್ದಿಕ್ ಪಾಂಡ್ಯ ಅಥವಾ ಶಿವಂ ದುಬೆ ಅವರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿತ್ತು. ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.