This is the title of the web page
This is the title of the web page

ಕಬ್ಜ’ ಟ್ರೈಲರ್ ಬಿಡುಗಡೆಗೆ ಭರ್ಜರಿ ಯೋಜನೆ: ದಿನಾಂಕ, ಸ್ಥಳ ಮಾಹಿತಿ ಇಲ್ಲಿದೆ

‘ಕೆಜಿಎಫ್ 2’, ‘ಕಾಂತಾರ’ ಅಬ್ಬರದ ಬಳಿಕ ಬಹು ನಿರೀಕ್ಷೆ ಹುಟ್ಟಿಸಿರುವ ಕನ್ನಡ ಸಿನಿಮಾ ಎಂದರೆ ಅದು ಉಪೇಂದ್ರ ನಟನೆಯ ‘ಕಬ್ಜ’. ಆರ್ ಚಂದ್ರು ನಿರ್ದೇಶನದ ಈ ಸಿನಿಮಾದ ಬಗ್ಗೆ ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಇದೆ.

‘ಕಬ್ಜ’ ಸಿನಿಮಾವನ್ನು ಆರ್ ಚಂದ್ರು ನಿರ್ದೇಶನ ಮಾಡುತ್ತಿದ್ದು, ಸುಮಾರು ಎರಡು ವರ್ಷಗಳಿಂದಲೂ ಈ ಸಿನಿಮಾದ ಚಿತ್ರೀಕರಣ ಸಾಗುತ್ತಲೇ ಇದೆ. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಭಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವ ಕಾರಣ ಸಿನಿಮಾ ತಡವಾಗುತ್ತಿದೆ ಎನ್ನಲಾಗುತ್ತಿದೆ.

‘ಕಬ್ಜ’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಟ್ರೈಲರ್‌ಗಾಗಿ ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನಿಮಾದ ಟ್ರೈಲರ್ ಲಾಂಚ್‌ಗೆ ಚಿತ್ರತಂಡ ಭರ್ಜರಿ ಯೋಜನೆಯೊಂದನ್ನು ರೂಪಿಸಿದೆ.

ಹಿಂದಿ ವಿತರಕರಿಂದ ಮಾಹಿತಿ ಲೀಕ್!
‘ಕಬ್ಜ’ ಸಿನಿಮಾದ ಟ್ರೈಲರ್ ಬಿಡುಗಡೆ ಬಗ್ಗೆ ಸಿನಿಮಾದ ಹಿಂದಿ ಆವೃತ್ತಿಯ ವಿತರಕರಾಗಿರುವ ಆನಂದ್ ಪಂಡಿತ್ ಎಂಬುವರು ಮಾಹಿತಿ ಲೀಕ್ ಮಾಡಿದ್ದು, ‘ಕಬ್ಜ’ ಟ್ರೈಲರ್ ಮಾರ್ಚ್ 3 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಒಟ್ಟಿಗೆ ಹಲವು ಭಾಷೆಗಳಲ್ಲಿ ಒಂದೇ ದಿನ ಟ್ರೈಲರ್ ಬಿಡುಗಡೆ ಆಗಲಿದೆ.

ಕಬ್ಜ ಟ್ರೈಲರ್ ಬಿಡುಗಡೆ ಎಲ್ಲಿ?

ಮುಂಬೈನಲ್ಲಿ ಉಪೇಂದ್ರ ಸೇರಿದಂತೆ, ‘ಕಬ್ಜ’ ಸಿನಿಮಾದ ಎಲ್ಲ ಪಾತ್ರವರ್ಗದವರ ಸಮ್ಮುಖದಲ್ಲಿ ಹಾಗೂ ಬಾಲಿವುಡ್‌ಗೆ ಸೇರಿದ ವಿಶೇಷ ಅತಿಥಿಯ ಮೂಲಕ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆಯಂತೆ. ‘ಕಬ್ಜ’ ಸಿನಿಮಾ ಕನ್ನಡದ ದೊಡ್ಡ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾಕ್ಕೆ 120 ಕೋಟಿ ಬಂಡವಾಳ ಹೂಡಲಾಗಿದೆ ಎಂಬ ಸುದ್ದಿಯಿದೆ. ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ನಟ ಸುದೀಪ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಶ್ರಿಯಾ ಶಿರಿನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಬಹುಭಾಷಾ ನಟರು ಸಹ ‘ಕಬ್ಜ’ ಸಿನಿಮಾದಲ್ಲಿದ್ದಾರೆ.

‘ಕೆಜಿಎಫ್’ ಶೈಲಿನಲ್ಲಿ ಚಿತ್ರೀಕರಣ

ಸಿನಿಮಾಕ್ಕಾಗಿ ಬಹಳ ಶ್ರಮ ಪಟ್ಟಿರುವುದಾಗಿ ಆರ್.ಚಂದ್ರು ಈಗಾಗಲೇ ಹೇಳಿಕೊಂಡಿದ್ದು, ಸಿನಿಮಾದ ಕತೆಯನ್ನು ರಾಜಮೌಳಿಯ ತಂದೆ ಖ್ಯಾತ ಕತೆಗಾರ ವಿಜಯೇಂದ್ರಪ್ರಸಾದ್ ಅವರಿಂದ ಫೈನ್ ಟ್ಯೂನ್ ಮಾಡಿಸಲಾಗಿದೆ. ಸಿನಿಮಾವನ್ನು ತುಸು ‘ಕೆಜಿಎಫ್’ ಶೈಲಿಯಲ್ಲಿ ಡಾರ್ಕ್ ಶೇಡ್‌ನಲ್ಲಿ ಚಿತ್ರೀಕರಿಸಲಾಗಿದ್ದು, ‘ಕೆಜಿಎಫ್’ ಮಾದರಿಯಲ್ಲಿ ‘ಕಬ್ಜ’ದ ಕತೆಯೂ 70-80 ರ ದಶಕದಲ್ಲಿ ನಡೆವ ಕತೆಯನ್ನು ಹೊಂದಿರಲಿದೆ.