ಅನೂಪ್ ರೇವಣ್ಣ ಅಭಿನಯದ ನಾಲ್ಕನೇ ಚಿತ್ರ ಹೈಡ್ ಅಂಡ್ ಸೀಕ್ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ,
ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ಪುನೀತ್ ನಾಗರಾಜು ಹಾಗೂ ವಸಂತ್ರಾವ್ ಎಂ. ಕುಲಕರ್ಣಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್ ನಾಗರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಸ್.ವಿಶ್ವನಾಥ್ ಅವರುಗಳು ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದರು.
ಚಿತ್ರದಲ್ಲಿ ಅನೂಪ್ ರೇವಣ್ಣ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಧನ್ಯಾ ರಾಮ್ಕುಮಾರ್ ಚಿತ್ರದ ನಾಯಕಿ. ವೇದಿಕೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡುತ್ತ ರೇವಣ್ಣ ಅವರ ಮಗ ಹೀರೋ ಆಗಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ, ಇದು ಅವರ ನಾಲ್ಕನೇ ಚಿತ್ರ. ಟ್ರೈಲರ್ ನಲ್ಲಿ ಆತನ ಅಭಿನಯ ಚೆನ್ನಾಗಿ ಬಂದಿದೆ, ಚಿತ್ರವೂ ಸಹ ಚೆನ್ನಾಗಿರುತ್ತದೆ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಬರಬೇಕು ಎಂದರು.
ಚಿತ್ರರಂಗ ಇವತ್ತು ಚಾಲೆಂಜಿಂಗ್ ಏರಿಯಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸೀಮಿತ ಮಾರುಕಟ್ಟೆ ಇತ್ತು, ಈಗದು ವಿಸ್ತಾರವಾಗಿದೆ. ನಾನು ಈ ಚಿತ್ರದ ಶೂಟಿಂಗ್ ಟೈಮ್ನಲ್ಲಿ ಹೋಗಿದ್ದೇನೆ, ಎಲ್ಲರೂ ಕುಟುಂಬದ ರೀತಿ ಸಿನಿಮಾ ಮಾಡಿದ್ದಾರೆ ಎಂದುರೇವಣ್ಣ ಹೇಳಿದರು. ನಟ ಹಾಗೂ ಧನ್ಯಾ ಸಹೋದರ ಧೀರೇನ್ ರಾಮ್ ಕುಮಾರ್ ಮಾತನಾಡಿ ಹೈಡ್ ಅಂಡ್ ಸೀಕ್ ಮಾ.15ಕ್ಕೆ ರಿಲೀಸಾಗ್ತಿದೆ.
ನನ್ನ ತಂಗಿ ಧನ್ಯಾ, ಅನೂಪ್ ರ ಈ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ನಿರ್ದೇಶಕ ಪುನೀತ್ ನಾಗರಾಜು ಮಾತನಾಡಿ ಕಿಡ್ನಾಪಿಂಗ್ ಕೂಡ ಹೇಗೆ ಒಂದು ಆರ್ಗನೈಜೇಶನ್ ಮೂಲಕ ನಡೆಯುತ್ತೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ, ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಿಸಿದ್ದೇವೆ.
ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ನಾಯಕನೇ ಕಿಡ್ನಾಪರ್ ಆಗಿದ್ದು, ಹೆಚ್ಚು ಮಾತನಾಡದ, ಯಾವುದನ್ನೂ ಎಕ್ಸ್ಪ್ರೆಸ್ ಮಾಡದ ವ್ಯಕ್ತಿಯ ಪಾತ್ರ ಅನೂಪ್ ರೇವಣ್ಣ ಅವರದು. ಅಲ್ಲದೆ ನಾಯಕಿ ಒಬ್ಬ ಬ್ಯುಸಿನೆಸ್ ಮ್ಯಾನ್ ಮಗಳಾಗಿರುತ್ತಾರೆ ಅಂದರು. ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ ನನ್ನ ಪಾತ್ರದ ಹೆಸರು ಹಾಸಿನಿ, ಒಳ್ಳೇ ಫ್ಯಾಮಿಲಿಯಿಂದ ಬಂದ ಹುಡುಗಿ, ಅಂಥ ಹುಡುಗಿ ಕಿಡ್ನ್ಯಾಪ್ ಆದಾಗ ಆಕೆ ಎದುರಿಸಿದ ಪರಿಸ್ಥಿತಿ ಎಂಥಾದ್ದು, ಆ ಕಿಡ್ನಾಪರ್ ಉದ್ದೇಶ, ಹಿನ್ನೆಲೆ ಏನು ಅನ್ನೋದರ ಮೇಲೆ ಈ ಸಿನಿಮಾ ನಿಂತಿದೆ ಎಂದರು.ರಿಜೋ ಪಿ.ಜಾನ್ ಅವರ ಛಾಯಾಗ್ರಾಹಣ, ಸ್ಯಾಂಡಿ ಅದಾನ್ಕಿ ಅವರ ಸಂಗೀತ ಸಂಯೋಜನೆ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ.