ಅಂದು ಇಡೀ ಊರಿನಲ್ಲಿ ಶಿವರಾತ್ರಿಯ ಸಂಭ್ರಮ. ನಮಗೆ ಭಜನೆ ಹೇಳಲು ಹುಮ್ಮಸ್ಸು. ನಾವೂ ಹತ್ತು ಜನ ಬೆಳಗ್ಗೆಯಿಂದಲೇ ಯಾವ ಸೀರೆ ಉಡಬೇಕೆಂದು ನಿರ್ಧರಿಸಿಕೊಂಡು ಹಿಂದೂ ಸಂಪ್ರದಾಯದಂತೆ ತಲೆ ತುರುಬು ಹಾಕಿಕೊಂಡು ಸುತ್ತ ಬಿಳಿ ಹೂವನ್ನು ಮುಡಿದುಕೊಂಡು ರೆಡಿಯಾಗಿದ್ದೆವು. ಎಲ್ಲರೂ ಬಂದ ನಂತರ ಮುಗಳ್ನಗೆ ಬೀರಿ ಪರಸ್ಪರ ಶುಭಾಷಯ ಬೀರಿ.
ಅಂತರರಾಷ್ಟ್ರೀಯ ಮಹಿಳಾದಿನಾಚರಣೆಯ ಶುಭಕೋರುತ್ತಾ ಹೆಣ್ಣೆಂಬ ಭಾವಕ್ಕೆ ಸ್ವಲ್ಪ ಹೆಚ್ಚೆ ಹಲ್ಲು ಕಿರಿದೆವು.ದೇವರ ದರ್ಶನ ಮುಗಿಸಿ, ನಮಸ್ಕರಿಸಿ ಹೂವು ತೆಗೆದು ತಲೆಗೆ ಸಿಕ್ಕಿಸುತ್ತಾ ತೀರ್ಥವನ್ನು ಕುಡಿದು ಭಜನೆ ಮಾಡಲು ಚಾಪೆ ಹಾಸಿ ಮೈಕ್ ಮುಂದೆ ಕುಳಿತು ಆಸೀನರಾದೆವು.
ಗಣಪತಿಗೆ ನಮಿಸಿ ಹಾಡಿ ಶಿವಭಜನೆ ಹಾಡಲು ಶುರುಮಾಡಿದೆವು. ಮೈಕ್ ತೊಂದರೆಇದ್ದರೂ ನಮ್ಮ ಪಾಡಿಗೆ ನಾವು ಮೈಕ್ ಹಿಡಿದೇ ಭಕ್ತಿಯಿಂದ ಹಾಡುತ್ತಿದ್ದೆವು. ನಗರದ ಜನರೆಲ್ಲ ದೇವರ ದರ್ಶನ ಮುಗಿಸಿ ಜೊತೆಗೆ ನಮ್ಮನ್ನು ನೋಡಿ ಭಜನೆಯನ್ನ ಕೇಳಿ ಒಂದು ಫೋಟೋ ಕ್ಲಿಕ್ಕಿಸಿ ಹೋಗುತ್ತಿದ್ದರು. ನಾವೂ ಒಂದೇ ರೀತಿಯ ಸೀರೆ ಉಟ್ಟಿದ್ದು ಆಕರ್ಷಣೆಗೆ ಕಾರಣ ಎನ್ನಬಹುದು.
ಅರ್ಧ ಗಂಟೆ ಕಳೆದ ನಂತರ ಅಚ್ಚರಿಯೆಂದರೆ ವಿದೇಶಿಗರು ಈಶ್ವರ ದೇವಾಲಯಕ್ಕೆ ಬಂದು ನಮ್ಮನ್ನು ನೋಡುತ್ತಾ ಹಾಡುವುದನ್ನು ಕೇಳುತ್ತಾ ನಿಂತುಬಿಟ್ಟರು. ನಮ್ಮ ಶ್ರವಣಬೆಳಗೊಳ ಮೊದಲೇ ಪ್ರವಾಸಿತಾಣ, ಅಲ್ಲಿಗೆ ವೀಕ್ಷಿಸಲು ಬಂದಿದ್ದ ವಿದೇಶಿಯರು ಈಶ್ವರ ದೇಗುಲಕ್ಕೆ ನಮ್ಮ ಸಂಸ್ಕೃತಿಯನ್ನು ತಿಳಿಯಲು ಬಂದಿದ್ದರು. ಇಬ್ಬರು ಮಹಿಳೆಯರು ಇಬ್ಬರು ಗಂಡಸರು ಬಂದಿದ್ದರು.
ನಮ್ಮ ಭಜನಾ ತಂಡದವರನ್ನು ಅವರ ಕ್ಯಾಮೆರಾ ಮೊಬೈಲ್ನಲ್ಲಿ ಫೋಟೋ ತೆಗೆದು ವಿಡಿಯೋ ಮಾಡಿಕೊಂಡರು. ನನಗೆ ಅವರನ್ನು ನೋಡುವುದೇ ಕೌತುಕ ಎಷ್ಟು ಗಂಭೀರವಾಗಿ ಗಮನಿಸುತ್ತಿದ್ದಾರೆಂದು. ಸ್ವಲ್ಪ ಹೊತ್ತಿನ ನಂತರ ದೇಗುಲದೊಳಗೆ ಹೋಗಿ ಹೂವಿನ ಪ್ರಸಾದ ತೆಗೆದುಕೊಂಡು ಅದನ್ನು ಕೈಯಲ್ಲಿಡಿದು ತಮ್ಮ ತಲೆಗೆ ಮುಡಿದುಕೊಂಡರು. ನನಗೋ ಬಲು ಅಚ್ಚರಿಯಾಯ್ತು. ಮಗಳ ಕೈಲಿ ಬೇಗ ಮೊಬೈಲ್ ತೆಗೆದು ಕ್ಲಿಕ್ಕಿಸಲು ಹೇಳಿದೆ.
ಎಷ್ಟೋ ಶಾಲೆಗಳಲ್ಲಿ. ಹಾಗೂ ಹೆಣ್ಣುಮಕ್ಕಳು ಬಳೆ ಹಾಕಲು ಹೂವು ಮುಡಿಯಲು ಹಿಂಜರಿಯುವ ಹಿಂದೂ ಹೆಣ್ಣುಮಕ್ಕಳಿಗೆ ಇವರು ನಿಜಕ್ಕೂ ಸ್ಪೂರ್ತಿ ಯಾಗಿ ನಿಂತರು. ಧರ್ಮ ಯಾವುದಾದರೇನು?, ಭಾಷೆ ಯಾವುದಾದರೇನು?, ಒಳಿತನ್ನು ಅಪ್ಪಿಕೊಂಡು ಒಪ್ಪಿಕೊಳ್ಳುವವರದೇ ವಿಶಾಲ ಸಹೃದಯ ಮನೋಭಾವವಲ್ಲವೇ ಸ್ನೇಹಿತರೇ.
ಇತ್ತೀಚೆಗೆ ಹದಿನೈದು ದಿನಗಳ ಹಿಂದೆ ಮಂತ್ರಾಲಯದ ಸ್ವಾಮೀಜಿಯವರನ್ನು ನೋಡಲು ಅವರ ಮಾತು ಕೇಳಲು ಸುಮಾರು ಇಪ್ಪತ್ತೈದು ಮಹಿಳೆಯರು ಸೀರೆ ಉಟ್ಟುಕೊಂಡು ಹೂವು ಮುಡಿದುಕೊಂಡು ಹಣೆಗೆ ಕುಂಕುಮ ಇಟ್ಡಕೊಂಡು ಭಕ್ತಿ ಭಾವದಿ ಕುಳಿತು ಮಾತುಕೇಳಿದ್ದ ವಿಡಿಯೋ ನೆನಪಿಗೆ ಬಂತು. ಇದೇ ಅಲ್ವೇನ್ರೀ ನಿಜವಾದ ಭಕ್ತಿಭಾವ.
ನಮ್ಮ ನಾಡಲ್ಲಿ ವಸ್ತ್ರಸಂಹಿತೆ ಅಳವಡಿಸಿದ್ದರೂ ಪ್ಯಾಂಟ್ ಶರ್ಟು ಹಾಕಿ ತಲೆಬಿಟ್ಟು ಬರುವವರಿಗೆ ಏನನ್ನಬೇಕೋ ಕ್ಷಣಮಾತ್ರ ತಿಳಿಯದಾಯಿತು. ಒಳಿತ ನಡವಳಿಕೆ ಎಲ್ಲರಲ್ಲೂ ಇರುತ್ತದೆ. ಸಕರಾತ್ಮಕ ಅಂಶವನ್ನು ಅಳವಡಿಸಿಕೊಂಡು ನಮ್ಮ ನಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಏನಂತಿರಿ?.ಪ್ರೇಮಪ್ರಶಾಂತ್ ಶ್ರವಣಬೆಳಗೊಳ