ಬೇಲೂರು: ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀ ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣಕ್ಕೆ ಕ್ಷೇತ್ರದ ಜನರು ಭಾಗಿಗಳಾಗಿ ಸಾಕ್ಷಿಕರಿಸಿ ಇತಿಹಾಸ ನಿರ್ಮಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಬುಧವಾರ ನಗರದ ಶ್ರೀ ಶಂಕರ ಮಠದಲ್ಲಿ ಗುರುಗಳ ದರ್ಸನ ಪಡೆದು,ದೇವರಿಗೆ ಪೂಜೆ ಸಲ್ಲಿಸಿ, ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳು ದಿನಾಂಕ:22-01-2024 ರಂದು ಸೋಮವಾರ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣದ ಅಂಗವಾಗಿ ದೇಗುಲ ಸಮೀಪದ ಬಯಲು ರಂಗ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಸಮುದಾಯದವರ ಸಹಕಾರದೊಂದಿಗೆ ರಾಮ ತಾರಕ ಜಪ, ತಪ, ಹೋಮ, ಹವನ, ಶ್ರೀರಾಮನ ಭಕ್ತರು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಲೆಂದು ಎಲ್ಇಡಿ ಸ್ಕ್ರೀನ್ ಅಳವಡಿಸಲಾಗುವುದು. ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಂತೆ ಅಂದು ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಸೂರ್ಯ ಮುಳುಗಿದ ನಂತರ ದೀಪಗಳನ್ನು ಹಚ್ಚಿ ನಿಜವಾದ ದೀಪಾವಳಿ ಆಚರಿಸಬೇಕು.
ತಾಲೂಕಿನ ಎಲ್ಲ ದೇಗುಲಗಳಲ್ಲೂ ಪೂಜೆ, ಅಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ. ಬೇಲೂರಿನಲ್ಲಿ ಇತಿಹಾಸ ದೇಗುಲ ಇರುವುದರಿಂದ ಇಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸುತಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯ ಕೇಶವ ಮಾತನಾಡಿ, ಅಯೋಧ್ಯೆಯಲ್ಲಿ ಜುರುಗಲಿರುವ ಆ ದಿನದ ಐತಿಹಾಸಿಕ ಕ್ಷಣಕ್ಕೆ ಬೇಲೂರಿನ ಎಲ್ಲ ಶ್ರೀರಾಮ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕು ಎಂದರು.
ಕೆ.ಆರ್.ಮಂಜುನಾಥ್, ತೊ.ಚ.ನರಸಿಂಹಮೂರ್ತಿ, ಶಂಕರ ಮಠದ ಅಧ್ಯಕ್ಷ ಆರ್.ಸುಬ್ರಹ್ಮಣ್ಯ, ಬಿಜೆಪಿ ಮುಖಂಡ ಪ್ರಕಾಶ್, ಮುರಳಿ. ಸುರೇಶ್, ರಮೇಶ್, ವೇಣುಗೋಪಾಲ್, ಶ್ರೀಹರಿ ಸೇರಿದಂತೆ ಇತರರಿದ್ದರು.