ಮಾಗಡಿ: ಯಾವುದೇ ಫಲಾಪೇಕ್ಷೆ ಬಯಸದೇ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಏಕಲವ್ಯ ರೋವರ್ ಮುಕ್ತದಳದ ಮುಖ್ಯಸ್ಥರಾದ ಕಾಂಚನ ಮಾಲ ಮತ್ತು ಆರ್.ಜಿ.ಗಿರೀಶ್ ನೇತೃತ್ವದಲ್ಲಿ ಸ್ಥಳೀಯ ಸ್ವಯಂ ಸೇವಕರ ಸಹಕಾರದೊಂದಿಗೆ ತಿರುಮಲೆ ರಂಗನಾಥ ಸ್ವಾಮಿಯ ಪವಿತ್ರ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿರುವ ವಿದ್ಯಾರ್ಥಿಗಳ ಕಾರ್ಯಕ್ಕೆ ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ತಿರುಮಲೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಪವಿತ್ರ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವಸ್ಥಾನದ ಸಂತೋಷ್ ಅಯ್ಯಂಗಾರ್ ಕಲ್ಯಾಣಿ ಸ್ವಚ್ಚತೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು ಈ ವಿಚಾರವಾಗಿ ವೀಕ್ಷಿಸಲು ಬಂದಿದ್ದು, ಸ್ವಯಂಪ್ರೇರಿತವಾಗಿ ಏಕಲವ್ಯ ರೋವರ್ಸ್ ಸ್ಕೌಟ್ಸ್ ನ ಮಕ್ಕಳು ಕಲ್ಯಾಣಿ ಸ್ವಚ್ಛಗೊಳಿಸಿ ಹೂಳು ತೆಗೆಯುತ್ತಿರುವುದು ಶ್ಲಾಘನೀಯವಾಗಿದೆ.
ವಿದ್ಯಾರ್ಥಿಗಳು ಇಂಥಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬಹುದು.ಶಿಸ್ತು, ಸಂಯಮ, ಶಾಂತಿ ಮತ್ತು ಸೌಹಾರ್ದತೆ ಮನೋಭಾವ ರೂಢಿಸಿಕೊಳ್ಳಲು ಹಾಗೂ ನಮ್ಮಲ್ಲಿ ಸಹೋದರ ಸಹೋದರಿಯತೆ ಮನೋಭಾವ ಮೂಡಲು ಸಹಕಾರಿಯಾಗಿದೆ ಎಂದು ತಮ್ಮ ಬಾಲ್ಯದಲ್ಲಿ ಸ್ಕೌಟ್ಸ್ ನಲ್ಲಿ ಭಾಗವಹಿಸಿ ಮಾಡಿದ ಸಾಮಾಜಿಕ ಕಾರ್ಯಗಳ ಬಗ್ಗೆ ನೆನೆದರು. ಇದೇವೇಳೆ ದೇವಸ್ಥಾನದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಕಾರ್ಯಗಳಿಗೆ ಸಂಪೂರ್ಣವಾಗಿ ಕೈಜೋಡಿಸುವುದಾಗಿ ಹೆಚ್.ಎಂ.ರೇವಣ್ಣ ತಿಳಿಸಿದರು.
ಏಕಲವ್ಯ ರೋವರ್ಸ್ ಸ್ಕೌಟ್ಸ್ ಮುಖ್ಯಸ್ಥೆ ಕಾಂಚನಮಾಲಾ ಮಾತನಾಡಿ ಇದು ನಮ್ಮ ತಂಡದಿಂದ 106ನೇ ಕಲ್ಯಾಣಿ ಸ್ವಚ್ಛತೆಗೆ ಮುಂದಾಗಿದ್ದು, ದೇವಸ್ಥಾನದ ಸ್ಮಾರಕಗಳ ಮತ್ತು ಇತಿಹಾಸ ಪ್ರಸಿದ್ಧ ಕಲ್ಯಾಣಿಗಳ ರಕ್ಷಣೆಗಾಗಿ ಸಾರ್ವಜನಿಕರು ಕೈಜೋಡಿಸಬೇಕು ಮತ್ತು ಪರಿಸರ ವ್ಯವಸ್ಥೆಗಳು ನಮಗೆ ಶುದ್ಧ ಗಾಳಿ,ನೀರು, ಮತ್ತು ವೈವಿದ್ಯಮಯ ಸಸ್ಯ ಹಾಗೂ ಪ್ರಾಣಿಗಳ ಜೀವನಗಳನ್ನು ವ್ಯವಸ್ಥಿತ ರೂಪದಲ್ಲಿ ಕೊಂಡೊಯ್ಯುತ್ತದೆ.ನಮ್ಮಂತೆ ಭೂಮಿಯ ಆರೋಗ್ಯವೂ ಸಹ ಬಹಳ ಮುಖ್ಯ.ನಾವು ಅನಾರೋಗ್ಯಕ್ಕೆ ತುತ್ತಾದಾಗ ಹೇಗೆ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಗುಣವಾಗುತ್ತೇವೋ ಹಾಗೆಯೇ ಭೂಮಿಗೆ ಆದ ಮಾಲಿನ್ಯ, ಗಣಿಗಾರಿಕೆ, ಮರುಭೂಮೀಕರಣ, ಅರಣ್ಯ ನಾಶ ಹೀಗೆ ಅನೇಕ ಸಮಸ್ಯೆಗಳಿಂದ ಭೂತಾಯಿಯನ್ನು ಸಂರಕ್ಷಿಸಬೇಕಿದೆ ಎಂದು ಸಲಹೆ ನೀಡಿದರು.
ಏಕಲವ್ಯ ರೋವರ್ಸ್ ಆರ್.ಜಿ.ಗಿರೀಶ್, ರಂಗನ ಸೇವಕರಾದ ಸಂತೋಷ್ ಅಯ್ಯಂಗಾರ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.