ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗ ಯಶಸ್ವ ಈಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಅಣಿಯಾಗಿದ್ದಾರೆ.
ಎಮೋಷನಲ್ ಹಾಗೂ ಆಕ್ಷನ್ ಥ್ರಿಲ್ಕರ್ ಕಥಾಹಂದರ ಹೊಂದಿದ “ಅಗ್ನಿಲೋಕ” ಎಂಬ ಚಿತ್ರದಲ್ಲಿ ಹೆಚ್.ಎಂ.ಕೆ.ಮೂರ್ತಿ ಅವರ ಮೊಮ್ಮಗ ಹಾಗೂ ನಿರ್ದೇಶಕ, ನಿರ್ಮಾಪಕ ರಾಜೇಶ್ ಮೂರ್ತಿ ಅವರ ಪುತ್ರ ‘ಯಶಸ್ವ’ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ.
ತನ್ನ ತಾತ, ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾವಿದ, ತಂತ್ರಜ್ಞನಾಗಿ ಮುಂದುವರಿಯಬೇಕೆಂಬ ಮಹದಾಸೆ ಹೊತ್ತಿರುವ ಯಶಸ್ವ, ಈಗಾಗಲೇ ಮಾಸ್ ಕಮ್ಯುನಿಕೇಶನ್ ನಲ್ಲಿ ಡಿಗ್ರಿ ಮುಗಿಸಿಕೊಂಡು ವೆಲ್ ಪ್ರಿಪೇರ್ ಆಗಿ ಚಿತ್ರರಂಗಕ್ಕೆ ಧುಮುಕಿದ್ದಾರೆ. ತನ್ನ ತಾತನ ಹಾಗೆ ಚಿತ್ರರಂಗದಲ್ಲಿ ಆಕ್ಟಿಂಗ್ ಜೊತೆಗೆ ರೈಟಿಂಗ್ , ಪ್ರೊಡಕ್ಷನ್ ವಿಭಾಗದಲ್ಲೂ ತೊಡಗಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇನ್ನು ಮಗನ ಚಿತ್ರಕ್ಕೆ ರಾಜೇಶ್ ಮೂರ್ತಿ ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಜೊತೆಗೆ ಸಂಕಲನವನ್ನೂ ಸಹ ನಿರ್ವಹಿಸಿದ್ದಾರೆ. ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ತನ್ನ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ಅಗ್ನಿಲೋಕ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ. ವಿಷ್ಣು ಪುಷ್ಪ ಫಿಲಂಸ್ ಮೂಲಕ ಶ್ರೀಮತು ಪುಷ್ಪ ಮಂಜುನಾಥ್ ಅವರು ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಮಂಜುಶ್ರೀ ಅವರು ಈ ಚಿತ್ರದಲ್ಲಿ ಯಶಸ್ವ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಬಹಳ ವರ್ಷಗಳ ನಂತರ ನೆಲ ನರೇಂದ್ರಬಾಬು ಅವರ ಸಹೋದರ ನೆಲ ಮಹೇಶ್ ಅವರು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಎಸ್. ಮಂಜುನಾಥ್, ಅಜಿತ್ ಕುಮಾರ್, ಪ್ರಮೋದ್ ಹಿರೇಮಠ್ ಉಳಿದ ತಾರಾಗಣದಲ್ಲಿದ್ದಾರೆ. ವಿನೋದ್ ಅವರ ಛಾಯಾಗ್ರಹಣ, ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮುಂದಿನ ತಿಂಗಳು ಚಿತ್ರದ ಟ್ರೈಲರನ್ನು ರಿಲೀಸ್ ಮಾಡುವ ಯೋಜನೆಯಿದ್ದು, ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ಮೊದಲವಾರ ಅಗ್ನಿಲೋಕ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ನಿರ್ದೇಶಕ ರಾಜೇಶ್ ಮೂರ್ತಿ ಅವರು ತಿಳಿಸಿದ್ದಾರೆ.