ಬೆಂಗಳೂರು: ರಾಜ್ಯ ಸರ್ಕಾರ ಕನ್ನಡಪರವಾಗಿದ್ದು ಕಾನೂನು ಉಲ್ಲಂಘಿಸಿದರೆ ಸುಮ್ಮನಿರಲ್ಲ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ.ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಯಾರೇ ಕಾನೂನು ಉಲ್ಲಂಘಿಸಿದರೂ ಸುಮ್ಮನಿರಲ್ಲ ಎಂದು ಹೇಳಿದ್ದಾರೆ.
ನಾವು ಯಾರ ಪರವೂ ಅಲ್ಲ ವಿರುದ್ಧವೂ ಅಲ್ಲ. ಕನ್ನಡಪರವಾಗಿದ್ದೇವೆ. ಕನ್ನಡ ಅನುಷ್ಠಾನಕ್ಕೆ ಸರ್ಕಾರ ಪ್ರಯತ್ನಿಸಿದೆ, ಬದ್ಧವಾಗಿದೆ. ಈಗಾಗಲೇ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಸೂಚನೆ ಕೊಡಲಾಗಿದೆ. ಬಿಬಿಎಂಪಿಯವರು ಸಹ ಫೆ.28 ರವರೆಗೆ ಗಡುವು ನೀಡಿದ್ದಾರೆ.
ಕನ್ನಡ ಕಡ್ಡಾಯ ಮಾಡುತ್ತೇವೆ, ಮಾಡುವವರೆಗೂ ಸಂಯಮದಿಂದಿರಬೇಕು.
ಸಾರ್ವಜನಿಕರಿಗೆ ದಕ್ಕೆಯಾಗುವಂಹ ಕೆಲಸವನ್ನು ನಿನ್ನೆ ಮಾಡಲಾಗಿದೆ. ಹಾಗಾಗಿ ಪೊಲೀಸರು ಕಾನೂನುಕ್ರಮ ಜರುಗಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ರಕ್ಷಣೆ ಕೇಳಿದವರಿಗೆ ಪರಿಶೀಲಿಸಿ ಕೊಡುವುದು ನಮ್ಮ ಕರ್ತವ್ಯ ಎಂದು ಅವರು, ಇದೇ ಸಂದರ್ಭದಲ್ಲಿ ಹೇಳಿದ್ದಾರೆ.