ಬೆಂಗಳೂರು: ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ವಿಧಾನಸಭೆಗೆ ತಿಳಿಸಿದ್ದಾರೆ.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ನಿನ್ನೆ ನಾವು ಪ್ರಸ್ತಾಪಿಸಿದ ವಕೀಲರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಗೃಹಸಚಿವರಿಗೆ ಹೇಳಿಕೆ ನೀಡಲು ಅವಕಾಶ ಮಾಡಿಕೊಟ್ಟರು. ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ, ರಾಮನಗರದಲ್ಲಿ ವಕೀಲರು ಪ್ರತಿಭಟನೆ ಮಾಡಿದ ವಿಚಾರವನ್ನು ನಿನ್ನೆ ಪ್ರತಿಪಕ್ಷಗಳ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದರು.
ನಿನ್ನೆ ರಾಮನಗರದ ಘಟನೆಗೆ ಸಂಬಂಧಿಸಿದಂತೆ ನೀಡಿದ ಉತ್ತರ ಪ್ರತಿಪಕ್ಷಗಳಿಗೆ ಸಮಾಧಾನ ತಂದಿರಲಿಲ್ಲ. ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುವ ಬೇಡಿಕೆ ಇಟ್ಟಿದ್ದರು ಎಂದರು.ಐಜೂರುಪೊಲೀಸ್ ಠಾಣೆಯ ಪಿಎಸ್ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುತ್ತಿದ್ದೇವೆ. ವಕೀಲರ ಪ್ರತಿಭಟನೆಗೆ ಕಾರಣರಾದ ಚಾಂದ್ ಪಾಷ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಡಿವೈಎಸ್ಪಿ ನೇತೃತ್ವದಲ್ಲಿ ಘಟನೆಗೆ ಸಂಬಂ ಧಿಸಿದಂತೆ ತನಿಖೆ ಆರಂಭಗೊಂಡಿದೆ. ಪಿಎಸ್ಐ ಅಮಾನತ್ತು ಮಾಡಿರುವುದರಿಂದ ತನಿಖೆಗೂ ಅನುಕೂಲವಾಗಲಿದೆ. ರಾಮಗನರದಲ್ಲಿಈ ಹಿಂದೆ ಕೂಡ ಇಂತಹ ಘಟನೆಗಳು ಆಗಿದ್ದವು ಎಂದು ಅವರು ತಿಳಿಸಿದರು.
ಈ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ವಕೀಲರು ನಿರ್ಧಾರ ಮಾಡಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
ಅಶೋಕ್ ಮಾತನಾಡಿ, ಈ ಅಧಿವೇಶನದಲ್ಲಿ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಧಾನಸಭೆ ನಡೆಸಿ ಯಶಸ್ವಿಯಾಗಿ ಸಂಧಾನ ಮಾಡಿರುವುದಕ್ಕೆ ಸಭಾಧ್ಯಕ್ಷರನ್ನು ಅಭಿನಂದಿಸುವುದಾಗಿ ಹೇಳಿದರು.ರಾಮನಗರದ ಹಿಡಿತವನ್ನು ಮೀರಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ನಮ್ಮ ಬೇಡಿಕೆಯಂತೆ ಗೃಹಸಚಿವರು ಕ್ರಮ ಕೈಗೊಂಡಿದ್ದಾರೆ. ಅದಕ್ಕಾಗಿ ಗೃಹ ಸಚಿವರನ್ನು ಅಭಿನಂದಿಸುವುದಾಗಿ ಹೇಳಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.
ವಕೀಲರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡುವುದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳಾಗುತ್ತಿದ್ದವು. ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದ್ದು, ಈ ಉತ್ತರ ಸಮಾಧಾನ ತಂದಿದೆ ಎಂದು ಅವರು ಹೇಳಿದರು.