This is the title of the web page
This is the title of the web page

ನಾಯಂಡಹಳ್ಳಿ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿದ ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ಬೆಂಗಳೂರು ನಗರದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರು ಜಲಮಂಡಳಿಯ 120 ದಶಲಕ್ಷ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಗೋವಿಂದರಾಜನಗರ ಕ್ಷೇತ್ರದ ನಾಯಂಡಹಳ್ಳಿ ಕೆರೆ ತುಂಬಿಸುವ ಕಾರ್ಯಕ್ರಮಕ್ಕೆ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ನಾಯಂಡಹಳ್ಳಿ ಕೆರೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಯಾಂಕಿ ಕೆರೆಯನ್ನು ಹೊರತುಪಡಿಸಿ ಬೆಂಗಳೂರಿನ ಹೃದಯಭಾಗದಲ್ಲಿರುವ ವಿಶಾಲವಾದ ಮತ್ತೊಂದು ಕೆರೆ ಎಂದರೆ ಅದು ನಾಯಂಡಹಳ್ಳಿ ಕೆರೆ. ಸುಮಾರು 15 ಎಕರೆ ಪ್ರದೇಶದಲ್ಲಿರುವ ನಾಯಂಡಹಳ್ಳಿ ಕೆರೆಯ ಕಾಯಕಲ್ಪಕ್ಕೆ ಸಂಬಂಧಿಸಿದಂತೆ ಕೆಲಸಗಳು ಭರದಿಂದ ಸಾಗಿದ್ದು ಈ ತಿಂಗಳಾಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಲೋಕಾರ್ಪಣೆ ಆಗಲಿದೆ. ನಗರದಲ್ಲಿಯೇ ದೊಡ್ಡ ಪ್ರಮಾಣದ ನೀರು ಶೇಖರಣಾ ಸಾಮರ್ಥ್ಯ ಹೊಂದಿರುವ ಕೆರೆ ಎಂಬ ಹೆಗ್ಗಳಿಕೆಗೆ ನಾಯಂಡಹಳ್ಳಿ ಕೆರೆ ಪಾತ್ರವಾಗಿದೆ.

ಬೆಂಗಳೂರು ಜಲಮಂಡಳಿಯ ವತಿಯಿಂದ ಶುದ್ಧೀಕರಿಸಿದ ನೀರನ್ನು ಬೆಂಗಳೂರಿನ ಕೆರೆಯೊಂದಕ್ಕೆ ಮೊದಲ ಬಾರಿಗೆ ಹರಿಸಲಾಗುತ್ತಿದೆ. 15 ದಿನಗಳಲ್ಲಿ ಕೆರೆ ಭರ್ತಿಯಾಗಲಿದ್ದು ಈ ಸಂಬಂಧ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿ ಆಗಲಿದೆ. ನಾಯಂಡಹಳ್ಳಿ ಕೆರೆಯ ಅಭಿವೃದ್ಧಿ ಯಿಂದ ಎಸ್‍ಎಲ್ವಿ ಬಡಾವಣೆ, ಪಂತರಪಾಳ್ಯ, ಗುರುಸಾರ್ವಭೌಮನಗರ, ಐಟಿಐ ಬಡಾವಣೆ, ಜಿಆರ್ಸಿ ಬೃಂದಾವನ ನಾಗರಿಕರಿಗೆ ಈ ಕೆರೆಯು ಉತ್ತಮ ವಾತಾವರಣ ನಿರ್ಮಿಸಿ ಕೊಡಲಿದ್ದು ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ ಎಂದರು.

ಇನ್ನು, ಈ ಕೆರೆಯ ಪಕ್ಕದಲ್ಲಿಯೇ 205 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಈ ಆಸ್ಪತ್ರೆಯಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗೋವಿಂದರಾಜನಗರ ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.