ವಿಶೇಷ ವರದಿ
ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಹೆಚ್ಚು ಅಲ್ಪಸಂಖ್ಯಾತ ಮತಗಳೇ ಇರುವ ಕ್ಷೇತ್ರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ- ಚುನಾವಣಾ ಅಖಾಡದಲ್ಲಿ ಎದಿದ್ದ ಬಂಡಾಯವನ್ನು ಕಾಂಗ್ರೆಸ್ ಪಕ್ಷ ಶಮನಗೊಳಿಸಿದ್ಹೇಗೆ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣಾ ಅಖಾಡದಲ್ಲಿ, 20 ಮಂದಿ ಅಲ್ಪಸಂಖ್ಯಾತ ಸಮುದಾಯದವರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಅವರ ಪೈಕಿ ಸಾದಿಕ್ ಪೈಲ್ವಾನ್ ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂಬ ಪಟ್ಟನ್ನು ರಾಜ್ಯದ ನಾಯಕರಿಗೆ ತಿಳಿಸಿದ್ದರು. ಆಗ ಆಖಾಡಕ್ಕೆ ಎಂಟ್ರಿ ಕೊಟ್ಟಂತಹ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆಶಿ, ಸಾದಿಕ್ ಪೈಲ್ವಾನ್ ಮನವೊಲಿಸಿ, ಹಾಲಿ ಕಾಂಗ್ರೆಸ್ನ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಬೆಂಬಲ ಸೂಚಿಸುವಂತೆ ಮನವೊಲಿಕೆ ಮಾಡಿದರು. ಹಾಗಾದ್ರೆ ಸಾದಿಕ್ ಪೈಲ್ವಾನ್ ಮುಂದೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಹೇಳಿದ್ದೇನು? ಅದನ್ನೇ ಇಂದು ನಾವು ಹೇಳಲು ಹೊರಟಿದ್ದೇವೆ.
ಸದ್ಯ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ- ಚುನಾವಣೆ ಎದುರಾಗಿದೆ. ಇಲ್ಲಿ ಎರಡಕ್ಕೆ ಎರಡರಲ್ಲೂ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಮಣೆ ಹಾಕಿಲ್ಲ. ಅಹಿಂದ ಎಂಬ ಹೇಳುವ ಸಿಎಂ ಸಿದ್ಧರಾಮಯ್ಯರಿಂದ ಇಂತಹ ಅನ್ಯಾಯವಾದ್ರೆ, ನಾವು ಯಾರ ಬಳಿ ಹೋಗಬೇಕು? ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಸಮುದಾಯಕ್ಕೆ ಖುದ್ದು ಸಿಎಂ ಅವರೇ ಮದ್ದು ಎರೆದಿದ್ದಾರೆ.
ಸದ್ಯದಲ್ಲೇ ರಾಜ್ಯಸಭೆಗೆ ಖಾಲಿಯಾಗ ಲಿರುವ 4 ಸ್ಥಾನಗಳ ಪೈಕಿ 1 ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ, ಜೊತೆಗೆ ವಿಧಾನಪರಿಷತ್ನಲ್ಲಿ ಖಾಲಿಯಾಗಲಿರುವ 7 ಸ್ಥಾನದ ಪೈಕಿ 1 ನ್ನು ಸಮುದಾಯಕ್ಕೆ ನೀಡುವ ಭರವಸೆ ನೀಡಿ, ಎದ್ದಿದ್ದ ಬಂಡಾಯವನ್ನು ಶಮನಗೊಳಿಸಲಾಗಿದೆ.
ರಾಜ್ಯಸಭೆಗೆ 1, ವಿಧಾನಪರಿಷತ್ಗೆ 1 ಸ್ಥಾನವನ್ನು ನೀಡುತ್ತೇವೆ. ಈಗ ಬಂಡಾಯದ ಬಾವುಟ ಹಾರಿಸುವುದು ಬೇಡ. ಸುಖಾಸುಮ್ಮನೆ ಬಂಡಾಯ ಎಬ್ಬಿಸಿ, ಸದ್ಯಕ್ಕೆ ಸರ್ಕಾರಕ್ಕೆ ಇರುವ ವರ್ಚಸ್ಸು ಕುಂದಿಸಬೇಡಿ ಎಂದು ತಿಳಿಸಿ ಅಲ್ಪಸಂಖ್ಯಾತರ ಮನವೊಲಿಸಿದ್ದಾರೆ ಎನ್ನಲಾಗಿದೆ.
ಇನ್ನು ಸದ್ಯಕ್ಕೆ ಯಾವುದೇ ಗೊಂದಲಗಳು ಅಲ್ಪಸಂಖ್ಯಾತ ಸಮುದಾಯದಿಂದ ಇಲ್ಲದಂತಾಗಿದ್ದು, ಯಾವುದೇ ಬಂಡಾಯ ಎದ್ದರೂ ಅದನ್ನು ಶಮನಗೊಳಿಸುವ ಮುಲಾಮು ಸಿಎಂ ಸಿದ್ಧರಾಮಯ್ಯರ ಬಳಿಯಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ದಾವಣಗೆರೆಯಲ್ಲಿನ ಅಲ್ಪಸಂಖ್ಯಾತರ ಬಂಡಾಯ ಕಾಂಗ್ರೆಸ್ ಶಮನ ಮಾಡಿದ್ಹೇಗೆ?



