ಬೆಂಗಳೂರು: ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪ್ರಾಚೀನ ಪದ್ಧತಿಯ ಶೈಕ್ಷಣಿಕ ಬೋಧನೆ ಅವ್ಯಾಹತವಾಗಿ ನಡೆದಿದ್ದು ಇದೀಗ ಹೊಸ ಸ್ಮಾರಕ ಭವನ ನಿರ್ಮಾಣದಿಂದ ಇದಕ್ಕೆ ಹೆಚ್ಚಿನ ಪುಷ್ಟಿ ಬಂದಿದೆ ಎಂದು ಸಂಸ್ಥೆಯ ಕುಲಪತಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ವಿಜಯವಾಡದ ಉದ್ಯಮಿ ಎಚ್ ಟಿ ಮುರಳಿಧರರಾವ್ ಅವರು ಶೈಕ್ಷಣಿಕ ಉದ್ದೇಶದಿಂದ ನಿರ್ಮಿಸಿರುವಹವಾ ನಿಯಂತ್ರಿತ ಪ್ರೊಜೆಕ್ಟರ್ ಮುಂತಾದ ವಿಶೇಷ ಸೌಲಭ್ಯಗಳುಳ್ಳ 25 ಲಕ್ಷ ರೂಪಾಯಿ ವೆಚ್ಚದ ಕಲ್ಯಾಣಿ ಮತ್ತು ಹೆಚ್.ಟಿ.ವಾಸುದೇವ ರಾವ್ ಸ್ಮಾರಕ ಸಭಾಭವನವನ್ನು ಪೇಜಾವರ ಶ್ರೀಗಳು ಲೋಕಾರ್ಪಣೆಗೊಳಿಸಿದರು.
ದೇಶದಾದ್ಯಂತ ಪೂರ್ಣ ಪ್ರಜ್ಞ ವಿದ್ಯಾ ಪೀಠದ ವಿದ್ಯಾರ್ಥಿಗಳು ಶಾಸ್ತ್ರ ಪಾಠ ಪ್ರವಚನ, ಯಾಗ್ನಿಕ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ಉಪಕಾರಿಗಳಾಗಿದ್ದಾರೆ ಇದರ ಶ್ರೇಯಸ್ಸು ಶ್ರೀ ವಿಶ್ವೇಶ ತೀರ್ಥರಿಗೆ ಸೇರಬೇಕು ಎಂದು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಅಭಿಪ್ರಾಯ ಪಟ್ಟರು.
ಶ್ರೀವಿದ್ಯಾಮಾನ್ಯ ತೀರ್ಥರ ಮತ್ತು ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಅನುಗ್ರಹವನ್ನು ಬಾಲ್ಯದಿಂದಲೇ ಪಡೆದಿರುವ ನಾನು ಪೂರ್ಣಪ್ರಜ್ಞ ವಿದ್ಯಾ ಪೀಠಕ್ಕೆ ಕಿಂಚಿತ್ ಸೇವೆ ಸಲ್ಲಿಸಿದ್ದೇನೆ ಎಂದು ಮುರುಳಿಧರರಾವ್ ಹೇಳಿದರು.ಈ ಸುಸಜ್ಜಿತ ಸಭಾಭವನವನ್ನು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬಳಸುವುದಾಗಿ ಪೂರ್ಣಪ್ರಜ್ಞ ವಿದ್ಯಾ ಪೀಠದ ಪ್ರಾಚಾರ್ಯ ಶ್ರೀ ಸತ್ಯನಾರಾಯಣ ಆಚಾರ್ಯ ಅವರು ತಿಳಿಸಿದರು.