ಆರು ಬಾರಿಯ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮತ್ತು 2012 ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್ ಅವರು ನಿವೃತ್ತಿ ಘೋಷಿಸಿದ್ದಾರೆಂಬ ವರದಿಗಳ ನಡುವೆ ಪ್ರತಿಕ್ರಿಯಿಸಿರುವ ಮೇರಿ, ಈ ವರದಿಗಳನ್ನು ನಿರಾಕರಿಸಿದ್ದಾರೆ. ಈ ಕುರಿತು ಅವರು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
“ ಆತ್ಮೀಯ ಮಾಧ್ಯಮ ಮಿತ್ರರೇ, ನಾನಿನ್ನೂ ನಿವೃತ್ತಿ ಘೋಷಿಸಿಲ್ಲ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿವೃತ್ತಿ ಘೋಷಿಸಬೇಕೆಂದಾಗ ನಾನು ಖುದ್ದಾಗಿ ಮಾಧ್ಯಮದ ಮುಂದೆ ಹಾಜರಾಗುತ್ತೇನೆ. ನಾನು ನಿವೃತ್ತಿ ಘೋಷಿಸಿದ್ದೇನೆಂದು ಹೇಳುವ ಕೆಲ ಮಾಧ್ಯಮ ವರದಿಗಳನ್ನು ನಾನು ನೋಡಿದ್ದೇನೆ, ಇದು ನಿಜವಲ್ಲ,” ಎಂದಿದ್ದಾರೆ.
“ಜನವರಿ 24ರಂದು ದಿಬ್ರೂಘರ್ನಲ್ಲಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದೆ. ಕ್ರೀಡೆಯಲ್ಲಿ ಸಾಧಿಸುವ ಛಲ ಇನ್ನೂ ಇದೆ ಆದರೆ ವಯೋಮಿತಿಯು ನನಗೆ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ. ಈಗಲೂ ಫಿಟ್ನೆಸ್ ಮೇಲೆ ಗಮನ ಹರಿಸಿದ್ದೇನೆ ಹಾಗೂ ಯಾವಾಗ ನಿವೃತ್ತಳಾಗಬಯಸುತ್ತೇನೆಯೇ ಆಗ ಎಲ್ಲರಿಗೂ ಮಾಹಿತಿ ನೀಡುತ್ತೇನೆ,” ಎಂದು ಮೇರಿ ಕೋಮ್ ಹೇಳಿದ್ದಾರೆ.
ಬಾಕ್ಸರ್ಗಳಿಗೆ 40 ವರ್ಷ ವಯಸ್ಸಿನ ತನಕ ಮಾತ್ರ ಉನ್ನತ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಬಹುದೆಂಬ ಐಬಿಎ ನಿಯಮವಿರುವುದರಿಂದ ಮೇರಿ ಕೋಮ್ ನಿವೃತ್ತರಾಗಿದ್ದಾರೆಂದು ಈ ಹಿಂದೆ ಕೆಲ ವರದಿಗಳು ಹೇಳಿದ್ದವು.