ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ವಿರುದ್ಧದ ಅಕ್ರಮಗಳ ಕುರಿತ ತನಿಖೆಯ ದಿಕ್ಕನ್ನು ತಪ್ಪಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಿರುವವರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇನೆ. ಯಾರು ಇದ್ದಾರೆ ಇದರ ಹಿಂದೆ? ಈ ಬೆಳವಣಿಗೆಯಿಂದ ಬಹಳಷ್ಟು ನೋವಾಗುತ್ತಿದೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನಾನು ಸುಮ್ಮನಿರುವುದೇ ದೌರ್ಬಲ್ಯವಲ್ಲ. ರೋಹಿಣಿ ವಿರುದ್ಧ ನಡೆಯುತ್ತಿದ್ದ ತನಿಖೆಯ ಸತ್ಯತೆ ಹೊರಬರಬೇಕಿದೆ ಎಂದು ಹೇಳಿದರು.
‘2021ರ ಮೇ 9ರಂದು ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಕ್ರಮದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೆ. 2022ರ ಮೇ 17ರಂದು ಸರ್ಕಾರ ಕಮಿಟಿ ಮಾಡಿತ್ತು. ತನಿಖೆಗೆ ಮುಖ್ಯ ಕಾರ್ಯದರ್ಶಿ ಜಯರಾಮ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು. 2022ರ ಜೂನ್ 1ರಂದು ಮುಖ್ಯ ಕಾರ್ಯದರ್ಶಿ ನಿವೃತ್ತಿಯಾಗುವ ಒಂದು ದಿನ ಮುಂಚೆ ವಸತಿ ಇಲಾಖೆಯ ರವಿಶಂಕರ್ ಅವರನ್ನು ನೇಮಿಸಲಾಯಿತು. ಕೆಲವೇ ದಿನಗಳ ಅಂತರದಲ್ಲಿ ತನಿಖಾಧಿಕಾರಿಯನ್ನು ಏಕೆ ಬದಲಾಯಿಸಿದ್ದೀರಿ ಎಂದು ಪ್ರಶ್ನಿಸಿದರು.
9-6-2021ರಲ್ಲಿ ಅಂದಿನ ಸಿಎಂಗೆ ಪತ್ರ ಬರೆದಿದ್ದೆ. ರೋಹಿಣಿ ಸಿಂಧೂರಿ ಅಕ್ರಮದ ಬಗ್ಗೆ ತನಿಖೆ ಒತ್ತಾಯ ಮಾಡಿದ್ದೆ. ರೋಹಿಣಿ ಸಿಂಧೂರಿ 4ಜಿ ಎಕ್ಷಮ್ಷನ್ ನಡಿ 10 ಕೋಟಿ ರೂ. ಅನ್ನು ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಟ್ಯಾಬ್ಲೆಟ್ ಕೊಟ್ಟಿದ್ದರೂ ಹಣ ಬಿಡುಗಡೆ ಮಾಡಿರಲಿಲ್ಲ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 32 ಜನ ಇವರಿಂದಲೇ ಸತ್ತರು ಎಂದು ಗೊತ್ತಿದೆ. ಜಿಲ್ಲಾಧಿಕಾರಿ ನಿವಾಸದ ನವೀಕರಣ, ಈಜುಕೌಳ ನಿರ್ಮಾಣವನ್ನು ಕಾನೂನು ಬಾಹಿರವಾಗಿ ಮಾಡಿದರು. ಇವರು ಇದ್ದ ಎರಡು ವರ್ಷಕ್ಕೆ 16.35 ಲಕ್ಷ ರು. ಖರ್ಚು ಮಾಡಿದ್ದರು ಎಂದು ಆರೋಪಿಸಿದರು.
ರೂ.6 ಬಟ್ಟೆ ಬ್ಯಾಗ್’ಗೆ 48 ರೂ.ಕೊಟ್ಟಿದ್ದರು. ಜಿಲ್ಲಾಧಿಕಾರಿಗಳು ಕಾರ್ಯಾದೇಶ ಮಾಡಲು 2.5 ಕೋಟಿ ಅಷ್ಟೇ ಅವಕಾಶ ಇತ್ತು. ಆದರೆ, ಇವರು 8.5 ಕೋಟಿ ಕಾರ್ಯಾದೇಶ ಕೊಟ್ಟಿದ್ದರು. ಈ ಎಲ್ಲಾ ವಿಚಾರಗಳನ್ನು ವಿಧಾನಸೌಧದಲ್ಲಿ ಚರ್ಚೆ ಮಾಡಿದ್ದೆ. ಹೀಗಾಗಿ ರೋಹಿಣಿ ಸಿಂಧುರಿ ವಿರುದ್ಧದ ತನಿಖೆಯ ಸತ್ಯಾಸತ್ಯತೆ ಹೊರಹಬೇಕು ಎಂದು ಒತ್ತಾಯಿಸಿದರು.