ಹೈದರಾಬಾದ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ದಲ್ಲೂ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ತೆಲಂಗಾಣ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟಾರ್ ಪ್ರಚಾರಕರಾಗಿರುವ ಅವರು ಗುರುವಾರ ‘ಮೈನಾರಿಟಿ ಡಿಕ್ಲಾ ರೇಷನ್’ ಬಿಡುಗಡೆ ಮಾಡಿ, ಕರ್ನಾಟಕದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಐದು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಇಲ್ಲೂ ಜನತೆ ಕಾಂಗ್ರೆಸ್ ಬಯಸಿದ್ದು ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.
ತೆಲಂಗಾಣ ದಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಜನತೆ ಕೆಸಿ ಆರ್ ಆಡಳಿತದಿಂದ ಬೇಸರಗೊಂಡಿದ್ದು, ಕಾಂಗ್ರೆಸ್ ಗೆ ಒಂದು ಅವಕಾಶ ನೀಡಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.ದೇಶದ ಭವಿಷ್ಯ, ತೆಲಂಗಾಣ ಅಭಿವೃದ್ಧಿ ಗೆ ಕಾಂಗ್ರೆಸ್ ಬೇಕಾಗಿದೆ. ದಶಕಗಳ ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್ ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಕ್ಕೆ ಕಾಂಗ್ರೆಸ್ ಬದ್ಧ ವಾಗಿದ್ದು, ಉದ್ಯೋಗ ಮತ್ತು ಶಿಕ್ಷಣ ದಲ್ಲಿ ಮೀಸಲಾತಿ ಜಾರಿಗೊಳಿಸಲಿದೆ. ಕೆಸಿ ಆರ್ ಶೇ.12 ರಷ್ಟು ಮೀಸಲಾತಿ ಕೊಡುವ ಭರವಸೆ ನೀಡಿ ಎರಡು ಬಾರಿ ಅಧಿಕಾರ ನಡೆಸಿದರೂ ಕೊಡದೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಆರ್ಥಿಕ ಸಬಲೀಕರಣ, ವಖ್ಫ್ ಆಸ್ತಿ ರಕ್ಷಣೆ ಸೇರಿ ಇಂದು ನಾವು ಮೈನಾರಿಟಿ ಡಿಕ್ಲರೇಷನ್ ಮಾಡಿದ್ದೇವೆ. ಇದು ನಮ್ಮ ಖಚಿತ ಭರವಸೆ ಎಂದು ಹೇಳಿದರು.ತೆಲಂಗಾಣ ದಲ್ಲೂ ಹಿರಿಯ ನಾಗರಿಕರಿಗೆ ಮಾಸಿಕ 4 ಸಾವಿರ, ಹೆಣ್ಣು ಮಕ್ಕಳಿಗೆ 2500 ಸಾವಿರ, ರೈತರಿಗೆ ವಾರ್ಷಿಕ 15ಸಾವಿರ, ಕೃಷಿ ಕಾರ್ಮಿಕರಿಗೆ 12 ಸಾವಿರ, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಬಡವರು ಮನೆ ನಿರ್ಮಿಸಿಕೊಳ್ಳಲು 5ಲಕ್ಷ ರೂ. ನೆರವು, 500 ರೂ. ಗೆ ಸಿಲಿಂಡರ್ ಭರವಸೆ ನೀಡಿದ್ದೇವೆ.
ನೀವು ಆಶೀರ್ವಾದ ಮಾಡಿದರೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಶಿದ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಎ ಐ ಸಿಸಿ ಕಾರ್ಯಕಾರಿ ಸದಸ್ಯ ನಾಸೀರ್ ಹುಸೇನ್, ಮಾಜಿ ಕ್ರಿಕೆಟಿಗ ಅಜರುದ್ದಿನ್ ಉಪಸ್ಥಿತರಿದ್ದರು.