ಮಾಗಡಿ: ನಾವು ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಐದು ಭರವಸೆಗಳನ್ನು ನೀಡುತ್ತೇವೆ ಎಂದು ಹೇಳಿದ್ದು ಅವುಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ವಿರೋಧಿಗಳು ಕಾಂಗ್ರೆಸ್ಸಿಗರು ಲೋಕಸಭಾ ಚುನಾವಣೆ ಮುಗಿದ ಮೇಲೆ ಭರವಸೆಗಳನ್ನು ನಿಲ್ಲಿಸಿ ಬಿಡುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ.
ಒಂದು ವೇಳೆ ನಾವು ಕೊಟ್ಟಿರುವ ಭರವಸೆಗಳನ್ನು ನಿಲ್ಲಿಸಿದರೆ ನಮ್ಮ ಕತ್ತು ಕೊಯ್ದು ಕೊಳ್ಳುತ್ತೇವೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ವಿರೋದಿಗಳಿಗೆ ಟಾಂಗ್ ನೀಡಿದರು.ಪಟ್ಟಣದ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲ್ಲೂಕು ಸವಿತಾ ಸಮಾಜದ ವತಿಯಿಂದ 2 ನೇ ವರ್ಷದ ಶ್ರೀ ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾಂಗ್ರೆಸ್ಸಿಗರಾದ ನಾವು ಚುನಾವಣೆ ಪೂರ್ವದಲ್ಲಿ ಉಚಿತ ವಿದ್ಯುತ್,ಉಚಿತ ಅಕ್ಕಿ,ಉಚಿತ ಬಸ್,ಮನೆಯೊಡತಿ ಖಾತೆಗೆ ಎರಡು ಸಾವಿರ,ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಯೋಜನೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದೆವು.
ಅದರಂತೆ ಈ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ.ಆದರೆ ನಮ್ಮ ವಿರೋಧಿಗಳು ಲೋಕಸಭಾ ಚುನಾವಣೆ ಬಳಿಕ ಈ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ಸಿಗರು ನಿಲ್ಲಿಸಿ ಬಿಡುತ್ತಾರೆ ಎಂದು ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ನಾವು ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ.ನಾವು ಐದು ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿರುವ ತನಕ ಇವುಗಳನ್ನು ನೀಡುತ್ತೇವೆ.ಒಂದು ವೇಳೆ ಇವುಗಳನ್ನು ನಿಲ್ಲಿಸಿದರೆ ನಾವು ಕತ್ತು ಕೊಯ್ದು ಕೊಳ್ಳುತ್ತೇವೆ ಎಂದು ಬಾಲಕೃಷ್ಣ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸವಿತಾ ಸಮಾಜವು ಪ್ರಸ್ತುತ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು.ಈ ಸಮಾಜದ ಬಗ್ಗೆ ಜಾತಿನಿಂದನೆ ಪದ ಬಳಕೆ ಮಾಡುವವರಿಗೆ ಕಾನೂನು ಶಿಕ್ಷೆಯ ಕುರಿತು ವಿಧಾನಸಭಾ ಕಲಾಪದಲ್ಲಿ ಧ್ವನಿ ಎತ್ತುತ್ತೇನೆ.ಮನುಷ್ಯ ಹುಟ್ಟಿದಾಗಿನಿಂದ ಅಂತ್ಯದವರೆಗೂ ಈ ಸಮಾಜದವರ ಅವಶ್ಯಕತೆಯಿದೆ.ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಮುದಾಯ ಭವನ ನಿರ್ಮಿಸಲು ಬದ್ದನಾಗಿದ್ದೇನೆ.
ಒಂದು ವೇಳೆ ನನ್ನ ಈ ಐದು ವರ್ಷಗಳ ಅವಧಿಯಲ್ಲಿ ಸಮುದಾಯ ಭವನ ನಿರ್ಮಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ಯಾಚಿಸಲು ಬರುವುದಿಲ್ಲ ಎಂದ ಅವರು ಪಟ್ಟಣದ ಪ್ರಮುಖ ರಸ್ತೆಗೆ ಶ್ರೀ ತ್ಯಾಗರಾಜ ಸ್ವಾಮೀಜಿಗಳ ಹೆಸರನ್ನು ನಾಮಕರಣಗೊಳಿಸಲು ಪುರಸಭಾ ಸಭೆಯಲ್ಲಿ ಪ್ರಸ್ಥಾಪಿಸಬೇಕು ಎಂದು ಪುರಸಭಾ ಸದಸ್ಯ ಹೆಚ್.ಜೆ.ಪುರುಷೋತ್ತಮ್ ಅವರಿಗೆ ಬಾಲಕೃಷ್ಣ ಸೂಚಿಸಿದರು.
ಚಲನಚಿತ್ರ ನಟ ಎಂ.ಎಸ್.ಮುತ್ತುರಾಜ್ ಮಾತನಾಡಿ ನಮ್ಮ ಸಮುದಾಯದ ಮಂಗಳ ವಾದ್ಯವಿಲ್ಲದೆ ಯಾವುದೇ ಮಂಗಳ ಕಾರ್ಯಗಳು ನಡೆಯುವುದಿಲ್ಲ.ಮನುಷ್ಯ ಸುಂದರವಾಗಿ ಕಾಣಲು ಸವಿತಾ ಸಮಾಜದವರು ಅತ್ಯವಶ್ಯಕವಾಗಿ ಬೇಕಾಗಿದ್ದು ಇತ್ತೀಚಿನ ದಿನಗಳಲ್ಲಿ ಸ್ಪಾ ಹೆಸರಿನಲ್ಲಿ ವಿವಿಧ ಸಮುದಾಯದವರೂ ಕೂಡಾ ನಮ್ಮ ವೃತ್ತಿಯನ್ನು ಅನುಸರಿಸುತ್ತಿದ್ದಾರೆ.ಇದು ನಮ್ಮ ಹೆಗ್ಗಳಿಕೆ.ನಮ್ಮ ಸಮುದಾಯವು ಮುಖ್ಯ ವಾಹಿನಿಗೆ ಬರಬೇಕಾದರೆ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಮುತ್ತುರಾಜ್ ಕರೆ ನೀಡಿದರು.
ಸವಿತಾ ಪೀಠ ಮಹಾಸಂಸ್ಥಾನ ಪೀಠಾದ್ಯಕ್ಷರಾದ ಶ್ರೀ ಶ್ರೀಧರಾನಂದ ಸರಸ್ವತಿ ಮಹಾಸ್ವಾಮಿ,ಜಡೇದೇವರ ಮಠಾಧಿಶರಾದ ಶ್ರೀ ಇಮ್ಮಡಿ ಬಸವರಾಜು ಸ್ವಾಮೀಜಿ, ಪುರಸಭಾ ಸದಸ್ಯ ಹೆಚ್.ಜೆ.ಪುರುಷೋತ್ತಮ್, ಜಿಲ್ಲಾದ್ಯಕ್ಷ ಜಿ.ವಿ.ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಮುನಿಕೃಷ್ಣ, ತಾಲ್ಲೂಕು ಅದ್ಯಕ್ಷ ಸುರೇಶ್, ರಾಜ್ಯ ಸವಿತಾ ಸಮಾಜದ ಮಾಜಿ ಅದ್ಯಕ್ಷ ಯು.ಕೃಷ್ಣಮೂರ್ತಿ, ಎಲ್.ಐ.ಸಿ.ಶಿವಕುಮಾರ್, ತೇಜೇಶಕುಮಾರ್, ಮುಖಂಡರಾದ ಬೊಮ್ಮನಹಳ್ಳಿ ಮಂಜುನಾಥ್, ಕುಣಿಗಲ್ ನಾರಾಯಣ್, ಎಂ.ಸಿ.ಚಿನ್ನರಾಜು, ರಾಮಾಂಜಿನಪ್ಪ, ತಿರುಮಲೆ ವೆಂಕಟೇಶ್, ಪತ್ರಕರ್ತ ಮುನಿಯಪ್ಪ, ಲಕ್ಷ್ಮೀಪತಿರಾಜು, ಪ್ರಕಾಶ್, ತಿಮ್ಮೇಶ್, ಬಾಳೇನಹಳ್ಳಿ ಪರಮೇಶ್, ರಮೇಶ್ ಸೇರಿದಂತೆ ಮತ್ತಿತರಿದ್ದರು.