ಆನೇಕಲ್: ಮಹಿಳೆಯರು ಆರೋಗ್ಯವಾಗಿ ದ್ದಾಗ ಮಾತ್ರ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಬಲರಾಗಲು ಸಾಧ್ಯ, ಹಾಗಾಗಿ ಎಲ್ಲ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಅವರು ತಾಲ್ಲೂಕಿನ ಸರ್ಜಾಪುರದ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ವುಮೆನ್ಸ್ ಸೋಲ್ ಸ್ಪಿರಿಟ್ ತಂಡದ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ರಾಜ್ಯದ ಎಲ್ಲಾ 1.28 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆ ಮೂಲಕ 2 ಸಾವಿರ ಹಣವನ್ನು ನೀಡಲಾಗುತ್ತಿದೆ. ಶಕ್ತಿ ಯೋಜನೆ ಮೂಲಕ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಲು ಅವಕಾಶ ಕಲ್ಪಿಸಿದೆ. ಆ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಕೈಜೋಡಿಸಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಫ್ಯಾಶನ್ ಶೋ , ಸೀರೆ ವಾಕಥಾನ್ , ಮಹಿಳೆಯರ ಬೈಕ್ ರೇಸ್ ಸೇರಿದಂತೆ ಹಲವು ಸ್ಪರ್ಧೆಗಳು ಗಮನ ಸೆಳೆದಿವೆ. ಎಲ್ಲಾ ಯಶಸ್ವಿ ಪುರುಷರ ಬೆನ್ನ ಹಿಂದೆ ಮಹಿಳೆಯರ ಶ್ರಮ ಅಡಗಿದೆ ಎಂಬುದನ್ನ ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ ಎಂದರು.
ವಿಮೆನ್ ಸೋಲ್ ಸ್ಪಿರಿಟ್ ಸಂಸ್ಥೆಯ ಮುಖ್ಯಸ್ಥೆ ಮಮತಾ ಎಸ್.ವೈ ಶಂಭಯ್ಯ ಮಾತನಾಡಿ, ಮಹಿಳೆಯರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಸರ್ಜಾಪುರದಲ್ಲಿ ಅದ್ದೂರಿಯಾಗಿ ಮಹಿಳಾ ದಿನಾಚರಣೆಯನ್ನು ಆಯೋಜನೆ ಮಾಡಲಾಗಿದೆ. ಸೀರೆ ತೊಟ್ಟು ಮಹಿಳೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರಿದ್ದಾರೆ. ಗ್ರಾಮೀಣ ಭಾಗದ ಎಲ್ಲಾ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರದೇ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕಿದೆ ಎಂದರು.
ಸರ್ಜಾಪುರ ಭಾಗದಲ್ಲಿ ಇದೆ ಮೊದಲ ಬಾರಿಗೆ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಿದ್ದು ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳೆಯರಿಗಾಗಿ ಫ್ಯಾಶನ್ ಶೋ, ಬೈಕ್ ರೇಸ್, ಸ್ಯಾರಿ ವಾಕಥಾನ್ ಸ್ಪರ್ಧೆಗಳನ್ನು ಆಯೋಜಿಸಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಗಿದೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದು ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವೈ ಶಂಭಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸರಸ್ವತಿ ಬಿ.ಶಿವಣ್ಣ, ಹುಸ್ಕೂರು ಮದ್ದೂರಪ್ಪ, ಎ.ಸತೀಶ್ ಕುಮಾರ್, ಉಲ್ಲಾಸ್ ಬಿ.ಶಿವಣ್ಣ, ಮಮತಾ ರಮೇಶ್, ಶ್ರೀದೇವಿ ಮದ್ದೂರಪ್ಪ, ರತ್ನಮ್ಮ ಶ್ರೀರಾಮುಲು, ಸುಜಾತ ನಾಗರಾಜು, ಡಾ.ರಾಧಿಕ ದೇವಿ, ಪೂಜಾ ಚಂದ್ರ, ನಸೀಬ್ ಹುನ್ನೀಸ, ಗಾಯಿತ್ರಿ, ಚಂದ್ರಕಲಾ, ಸೌಮ್ಯ ಹರೀಶ್, ದುರ್ಗಾ ದೇವಿ, ಸುಶೀಲಮ್ಮ, ನಾಗವೇಣಿ, ಹೇಮಲತಾ, ಮಮತಾ ಮಂಜುನಾಥ್, ರೇಷ್ಮ ಪ್ರಶಾಂತ್, ಸರಸ್ವತಿ ಜನಾರ್ಧನ್, ಅಂಬುಜಮ್ಮ, ಗೀತಾ ಲಕ್ಷ್ಮೀ ಹಾಗೂ ಮತ್ತಿತ್ತರರು ಹಾಜರಿದ್ದರು.
`ಮಹಿಳೆಯರು ಆರೋಗ್ಯವಾಗಿದ್ದರೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಬಲರಾಗಲು ಸಾಧ್ಯ’



