ಮಧುಗಿರಿ: ತಹಶೀಲ್ದಾರ್ ರವರ ಸೂಚನೆ ಮೇರೆಗೆ ಆಹಾರ ಇಲಾಖಾಧಿಕಾರಿಗಳು ಪಟ್ಟಣದ ಕಟ್ಟಡದ ಮೇಲೆ ದಾಳಿ ನಡೆಸಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರದಾರಿಗೆ ವಿತರಿಸಿ ಆಕ್ರಮವಾಗಿ ಶೇಖರಣೆ ಮಾಡಿದ್ದ ಸುಮಾರು ೧೦೧ ಚೀಲ ರಾಗಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ದೂರು ದಾಖಲಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಹಶೀಲ್ದಾರ್ ಶ್ರೀನಿವಾಸ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಪಟ್ಟಣದ ಬೆಂಕಿಪುರದ ೮ ನೇ ವಾರ್ಡ್ ನ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿನ ಕಟ್ಟಡಕ್ಕೆ ಭೇಟಿ ನಡೆಸಿ ಪರಿಶೀಲಿಸಿದಾಗ ಆಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕಟ್ಟಡದಲ್ಲಿ ಇಟ್ಟಿದ್ದ ಸರ್ಕಾರದ ಮುದ್ರೆ ಇರುವ ೬೨ ಗೋಣಿ ಚೀಲ ಹಾಗೂ ಮನೆಯ ಮುಂಭಾಗ ಕ್ಯಾಂಟರ್ ನಲ್ಲಿ ಮುದ್ರೆ ಯಿಲ್ಲದ ೩೯ ಬಿಳಿ ಬಣ್ಣದ ಗೋಣಿ ಚೀಲಗಳಲ್ಲಿ ಇನ್ನೂ ಸ್ಪಷ್ಟವಾಗಿ ಅಂದಾಜಿಸಲಾಗದ ತೂಕದ ಆಳತೆಯ ಹಾಗೂ ಅನಧಿಕೃತವಾಗಿ ಶೇಖರಿಸಿದ್ದ ರಾಗಿ ದೊರೆತಿದೆ. ಪಟ್ಟಣದ ವಾಸಿಗಳಾದ ಟಿ.ಜಿ.ರಾಕೇಶ್ ಹಾಗೂ ಚಾಲಕ ಗಿರೀಶ್ ಎಂಬಾತರ ಮೇಲೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕು ಎಂದು ಆಹಾರ ನಿರೀಕ್ಷಕ ನಸ್ರುದ್ದೀನ್ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಾಟಜಿಟUಕಿನ ಆಹಾರ ಇಲಾಖೆಯ ಕೆಲ ಅಧಿಕಾರಿಗಳು ಈ ಆಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು ಜನರಿಂದ ಕೇಳಿ ಬರುತ್ತಿವೆ.



