ಹನೂರು: ಕಲುಷಿತ ಆಹಾರ ಹಾಗೂ ನೀರು ಸೇವನೆ ಮಾಡಿ 6 ಮಂದಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ಹಲಗಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲಗಾಪುರ ಗ್ರಾಮದ ನಿವಾಸಿಗಳಾದ ಶಿವಣ್ಣ(60) ರತ್ನಮ್ಮ (50)ಗುರುಸ್ವಾಮಿ(55) ಶಿವಮಲ್ಲಮ್ಮ(65) ಸಾಕಮ್ಮ(55) ಮಹಾದೇವಸ್ವಾಮಿ (50) ಕಲುಷಿತ ಆಹಾರ ಸೇವನೆ ಮಾಡಿ ನಿತ್ರಾಣಗೊಂಡಿದ್ದ ಇವರನ್ನು ಸ್ಥಳೀಯರು ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ರವರು ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಪಡೆದ ಗ್ರಾಮಸ್ಥರು ಚೇತರಿಸಿಕೊಂಡು ಮತ್ತೆ ಗ್ರಾಮಕ್ಕೆ ತೆರಳಿದ್ದಾರೆ.ಘಟನೆ ವಿವರ: ಸೋಮವಾರದಂದು ಹಲಗಾಪುರದಲ್ಲಿ ನಡೆದ ಆರಾಧನೆ ಮಹೋತ್ಸವದಲ್ಲಿ ಆಹಾರ ಸೇವಿಸಿ ಈ ಘಟನೆ ಆಗಿದೆ ಎಂದು ಹೇಳಲಾಗುತ್ತಿದೆ.
ಗ್ರಾಮಸ್ಥರಿಗೆ ವಾಂತಿಬೇದಿ ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ರವರ ಸೂಚನೆಯ ಮೇರೆಗೆ ಗ್ರಾಮಕ್ಕೆ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮನೆಮನೆಗೂ ಭೇಟಿ ಕೊಟ್ಟು ಅಗತ್ಯ ಔಷಧ ವಿತರಿಸಿದ್ದಾರೆ.ಗ್ರಾಮದ ಹಿರಿಯ ಮುಖಂಡ ಗುರುಮಲ್ಲಪ್ಪ ಎಂಬುವರು ಮಾತನಾಡಿ ಹಲಗಾಪುರ ಗ್ರಾಮದಲ್ಲಿರುವ ಟ್ಯಾಂಕ್ ಸ್ವಚ್ಛಗೊಳಿಸಿ ಹಲವು ದಿನಗಳ ಕಳೆದಿದೆ.
ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕೋತಿಗಳು ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಮುಳುಗಿ ಹೊರಬರುವುದರಿಂದ ಅವುಗಳ ಕೂದಲು ಹಾಗೂ ಮಲ ಮೂತ್ರ ಕುಡಿಯುವ ನೀರಿನಲ್ಲಿ ಮಿಶ್ರಣವಾಗುತ್ತಿದೆ. ಇದನ್ನೇ ಗ್ರಾಮಸ್ಥರೆಲ್ಲರೂ ಕುಡಿಯುತ್ತಿರುವುದರಿಂದ ಗ್ರಾಮಸ್ಥರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಈ ಸಂಬಂಧ ಬಂಡಳ್ಳಿ ಪಂಚಾಯಿತಿಯ ಪಿಡಿಒ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಟ್ಯಾಂಕ್ ನಿಂದ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ಪರೀಕ್ಷೆ, ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.