ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟ 11 ಅಭಿಮಾನಿಗಳ ನೆನಪಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಮೀಸಲಿರಿಸಲು ಕೆಎಸ್ಸಿಎ ಮತ್ತು ಆರ್ಸಿಬಿ ಮ್ಯಾನೇಜ್ಮ್ಮೆಂಟ್ ನಿರ್ಧರಿಸಿದೆ.ಈ ಕುರಿತು ಮಂಗಳವಾರ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೊಷ್ಠಿಯಲ್ಲಿ ಆರ್ಸಿಬಿಯ ಅಧಿಕಾರಿಗಳು ತಿಳಿಸಿದರು. 2025ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ, ಸತತ 18 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿತ್ತು. ಇದರ ವಿಜಯೋತ್ಸವಕ್ಕಾಗಿ ಲಕ್ಷಾಂತರ ಜನರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ನೆಚ್ಚಿನ ತಾರೆಗಳನ್ನು ಕಣ್ತುಂಬಿಸಿಕೊಳ್ಳುವ ಧಾವಂತದಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದರು. ಜನದಟ್ಟಣೆಯಿಂದಾಗಿ ನೂಕುನುಗ್ಗಲು ಸಂಭವಿಸಿತು. ವೇಳೆ ಕಾಲ್ತುಳಿತ ಸಂಭವಿಸಿತು. ಈ ಘಟನೆಯಲ್ಲಿ11 ಆರ್ಸಿಬಿ ಅಭಿಮಾನಿಗಳು ದಾರುಣ ಸಾವು ಕಂಡರು. ಐಪಿಎಲ್ ಇತಿಹಾಸದಲ್ಲೇ ಇದೊಂದು ಕಹಿ ಘಟನೆಯಾಗಿ ಮಾರ್ಪಟ್ಟಿತು. ಕೇವಲ ಐಪಿಎಲ್ ಪಂದ್ಯಗಳು ಮಾತ್ರವಲ್ಲದೆ, ಎಲ್ಲ ಅಂತರಾಷ್ಟ್ರೀಯ ಪಂದ್ಯಗಳಲ್ಲೂ 11 ಆಸನಗಳನ್ನು ಮೀಸಲಿರಿಸುವುದಾಗಿ ಕೆಎಸ್ಸಿಎ ತಿಳಿಸಿದೆ.ಆರ್ಸಿಬಿ ಅಭ್ಯಾಸ ಜರ್ಸಿ ಸಂಖ್ಯೆ 11 ಆಸನಗಳು ಮೀಸಲು ಮಾತ್ರವಲ್ಲದೆ, ಆರ್ಸಿಬಿ ತಂಡ ಈ ಬಾರಿ ಅಭ್ಯಾಸದ ವೇಳೆ 11ನೇ ಸಂಖ್ಯೆಯ ಜರ್ಸಿಯನ್ನು ಧರಿಸಲಿದೆ. ಜತೆಗೆ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕಿಳಿಯಲಿದೆ ಎಂದು ಆರ್ಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ತಿಳಿಸಿದರು. ”ಇದು ನಮ್ಮ ಅಭಿಮಾನಿಗಳಿಗೆ ನಾವು ನೀಡುವ ಗೌರವವಾಗಿದೆ. ಅವರು ಯಾವಾಗಲೂ ನಮ್ಮ ಪ್ರಯಾಣದ ಭಾಗವಾಗಿ ಉಳಿಯುತ್ತಾರೆ,” ಎಂದು ಅವರು ಹೇಳಿದರು.ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕಳೆದ ಬಾರಿಯ ಘಟನೆಯಿಂದ ಎಚ್ಚೆತ್ತಿರುವ ಆರ್ಸಿಬಿ, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವ್ಯಾಪಕ ಸುರಕ್ಷತಾ ಕ್ರಮಗಳನ್ನು ಈ ಬಾರಿ ಕೈಗೊಂಡಿದೆ. ತವರಿನ ಏಳು ಪಂದ್ಯಗಳ ಪೈಕಿ ಐದು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿರುವ ಆರ್ಸಿಬಿ, ಉಳಿದೆರಡು ಪಂದ್ಯಗಳನ್ನು ರಾಯಪುರದಲ್ಲಿ ಆಡಲಿದೆ. ಬಿಸಿಸಿಐ, ಕೆಎಸ್ಸಿಎ ಮತ್ತು ಆರ್ಸಿಬಿ ನಡುವಿನ ನವೀಕರಿಸಿದ ಒಪ್ಪಂದಗಳ ಅಡಿಯಲ್ಲಿ, ರಾಜ್ಯ ಘಟಕವು ಪ್ರಮುಖ ಸಂಘಟಕರಾಗಿ ಕಾರ್ಯನಿರ್ವಹಿಸಲಿದೆ ಮತ್ತು ಫ್ರಾಂಚೈಸಿಯು ತುರ್ತು ಯೋಜನಾ ಶಿಷ್ಠಾಚಾರಗಳು ಸೇರಿದಂತೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಜಾರಿಗೆ ತರುತ್ತದೆ ಮತ್ತು ಕ್ರೀಡಾಂಗಣ ಒಪ್ಪಂದದ ಯಾವುದೇ ಉಲ್ಲಂಘನೆಗೆ ಪರಿಹಾರ ನೀಡುತ್ತದೆ ಎಂದು ಮೆನನ್ ತಿಳಿಸಿದರು.ಈ ಎಸ್ಒಪಿಗಳನ್ನು ಫ್ರಾಂಚೈಸಿ ಮತ್ತು ರಾಜ್ಯಸಂಸ್ಥೆ ಎರಡೂ ಅನುಸರಿಸುತ್ತವೆ. ವಿಜಯ ಮೆರವಣಿಗೆಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳೂ ಜಾರಿಯಲ್ಲಿವೆ. ಆರ್ಸಿಬಿ ಕ್ರೀಡಾಂಗಣದ ಒಳಗೆ ಮತ್ತು ಸುತ್ತಮುತ್ತಲಿನ ಹಲವಾರು ಹೊಸ ಪ್ರೇಕ್ಷಕರ ನಿರ್ವಹಣಾ ಕ್ರಮಗಳನ್ನು ಪರಿಚಯಿಸಿದೆ ಎಂದು ಅವರು ವಿವರಿಸಿದರು.



