ಆಧುನಿಕತೆಯ ಸೋಗಿನಲ್ಲಿ ನಮ್ಮ ಹಳ್ಳಿಗಳಲ್ಲಿ ಮೊದಲಿದ್ದ ವೈಭವ ಕಡಿಮೆಯಾಗುತ್ತಿದೆ. ವಿದ್ಯಾವಂತರೆಲ್ಲ ಪಟ್ಟಣ ಸೇರುತ್ತಿದ್ದಾರೆ. ಹೀಗಾಗಬಾರದು, ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕೆನ್ನುವ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಸಂಭವಾಮಿ ಯುಗೇ ಯುಗೇ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವು ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ.
ಜಯ್ ಶೆಟ್ಟಿ – ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಅರಮನೆಗಳ ನಗರ ಮೈಸೂರಿಗೆ ಭೇಟಿಕೊಟ್ಟು ಮಾಧ್ಯಮಗಳ ಜೊತೆ ಮಾತನಾಡಿತು.ತಮ್ಮ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಕುರಿತಂತೆ ಮಾತನಾಡಿದ ಚೇತನ್ ಚಂದ್ರಶೇಖರ್ ಶೆಟ್ಟಿ, ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ.
ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಚಿತ್ರಕ್ಕೆ ಚಿತ್ರದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ವೈರಲ್ ಆಗಿದ್ದು, ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡುತ್ತಿದ್ದೇವೆ.
ಹಳ್ಳಿಯ ಹುಡುಗರು ವಿದ್ಯಾವಂತರಾದ ಮೇಲೆ, ಕೆಲಸದ ನಿಮಿತ್ತ ಪಟ್ಟಣಕ್ಕೆ ಅಂತ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು ? ನಮ್ಮ ಹಳ್ಳಿಗಳು ಉಳಿಯುವುದಾದರೂ ಹೇಗೆ ?, ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲೆಸಬೇಕು, ಹಳ್ಳಿಗಳನ್ನು ಬೆಳೆಸಬೇಕು ಎಂಬ ಕಥಾಹಂದರದ ಮೇಲೆ ಈ ಚಿತ್ರ ಮಾಡಿದ್ದೇವೆ. ಜೂನ್ 21ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಕಮರ್ಷಿಯಲ್ ಚಿತ್ರವಾದರೂ, ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವಂಥ ಹಲವಾರು ಅಂಶಗಳು ನಮ್ಮ ಚಿತ್ರದಲ್ಲಿವೆ ಎಂದು ಹೇಳಿದರು.