ಬೆಂಗಳೂರು: ಕಬ್ಬು ಬೆಳೆಗಾರರ ಹೆಸರಿನಲ್ಲಿ ಕಬ್ಬಿನ ಟ್ರ್ಯಾಕ್ಟರ್ಗಳಿಗೆ ಹಚ್ಚಿರುವ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮುಧೋಳದಲ್ಲಿ ಕಬ್ಬಿನ ಟ್ರಾಕ್ಟರ್ಗಳಿಗೆ ಬೆಂಕಿ ಹಚ್ಚಿದ್ದು ತಾವಲ್ಲ ಎಂದು ರೈತರು, ರೈತ ಮುಖಂಡರು ಹೇಳಿದ್ದಾರೆ.ಕಬ್ಬು ಬೆಳೆಗಾರರ ಹೆಸರಲ್ಲಿ ಮುಧೋಳದಲ್ಲಿ ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ.ಈ ಮೂಲಕ ಸತ್ಯಾಂಶ ಹೊರಗೆಳೆಯಲಾಗುವುದು.ಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ನಡುವೆ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಿಡಿಕಾರಿದ್ದು, ಜವಾಬ್ದಾರಿಯುತ ಸರ್ಕಾರ ವಿಷಯದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೇ ಅತ್ತಿತ್ತ ಬೊಟ್ಟು ಮಾಡುತ್ತಾ, ಸಬೂಬು ಹೇಳುತ್ತಾ, ಸುಮ್ಮನೆ ಕುಳಿತಿರುವುದು ರೈತರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅನ್ನದಾತರ ನೋವು ಮತ್ತು ಆಗ್ರಹದ ಕಿಚ್ಚು, ವಿಕೋಪಕ್ಕೆ ತಿರುಗಿ ನಿಷ್ಕ್ರಿಯ ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸುವ ಜ್ವಾಲೆಯಂತಾಗಿದೆ.ತಮ್ಮ ಬದುಕಿನ ಆಧಾರವಾಗಿದ್ದ, ಕಬ್ಬು ತುಂಬಿದ ೫೦ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೇ ಬೆಂಕಿ ಹಚ್ಚುವ ಮಟ್ಟಿಗೆ ಆಕ್ರೋಶಕ್ಕೆ ಒಳಗಾಗಿರುವುದು ನಮ್ಮ ಕಬ್ಬು ಬೆಳೆಗಾರರ ಆಗ್ರಹದ ಜ್ವಾಲಾಗ್ನಿಗೆ ಸಾಕ್ಷಿಯಾಗಿದೆ.ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನಿಗೆ ಈ ಬೆಳವಣಿಗೆ ದುಃಖ ಮತ್ತು ಆತಂಕ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆ ಸಂಪೂರ್ಣ ನ್ಯಾಯಸಮ್ಮತವಾಗಿದೆ, ಆದರೆ ರಾಜ್ಯ ಸರ್ಕಾರವೇ ಸಕ್ಕರೆ ಕಾರ್ಖಾನೆ ಮಾಲೀಕರ ಹಿಡಿತದಲ್ಲಿ ಸಿಲುಕಿದ್ದು, ನಮ್ಮ ರೈತರಿಗೆ ಸಿಗುತ್ತಿರುವುದು ಮಾತ್ರ ಕೇವಲ ಭರವಸೆಳಷ್ಟೇ.ರೈತರ ನ್ಯಾಯಸಮ್ಮತ ಬೇಡಿಕೆಗಳಿಗೆ ಕನಿಷ್ಠ ಪ್ರಾಮಾಣಿಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನವನ್ನೂ ಸಹ ರಾಜ್ಯ ಸರ್ಕಾರ ಮಾಡದೆ ಕಾಲಹರಣ ಮಾಡಿತು. ಸಂವೇದನಾ ರಹಿತ ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ ರೈತರ ಆಸ್ತಿ ಪಾಸ್ತಿಗಳು ನಷ್ಟವಾಗುವ ಈ ದುರಂತಕ್ಕೆ ಕಾರಣವಾಗಿದೆ.
ಇನ್ನಾದರೂ ರಾಜ್ಯ ಸರ್ಕಾರ ನಿದ್ರೆಯಿಂದ ಎದ್ದು ಎಚ್ಚೆತ್ತುಕೊಂಡು ರೈತರ ಆಕ್ರೋಶ ತಣಿಸಲು ಮುಂದಾಗಬೇಕು.ರೈತರ ಸಂಕಷ್ಟಕ್ಕೆ ಕೇಂದ್ರದ ಮೇಲೆ ಸುಮ್ಮನೆ ದೋಷಾರೋಪಣೆ ಮಾಡುವ ಕಾಂಗ್ರೆಸ್ನ ಕೀಳು ಚಾಳಿ ನಿಲ್ಲಿಸಿ, ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ನೈತಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ. ನಮ್ಮ ರೈತರು ಇಂದು ಬೀದಿಗೆ ಇಳಿದಿದ್ದಾರೆ.ಕೂಡಲೇ ಮುಖ್ಯಮಂತ್ರಿಗಳು ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ, ಅವರ ನ್ಯಾಯಯುತ ಬೇಡಿಕೆಗೆ ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.



