ಬಣ್ಣದ ಲೋಕದ ಆಕರ್ಷಣೆಗೆ ಒಳಗಾಗದವರೇ ಇಲ್ಲ, ನಟನಾಗಬೇಕೆಂದು ಬಂದವರು ನಿರ್ದೇಶಕ, ನಿರ್ಮಾಪಕನಾಗಿದ್ದೂ ಇದೆ, ನಿರ್ದೇಶಕನಾಗಬೇಕೆಂದು ಬಂದವರು ನಟ, ನಿರ್ದೇಶಕನಾಗಿಯೂ ಬೆಳೆದಿದ್ದಾರೆ.
ಆದರೆ ಇಲ್ಲೊಬ್ಬ ವಿತರಕ ನಿರ್ದೇಶಕನಾಗುತ್ತಿರುವುದು ವಿಶೇಷ. ದಶಕದ ಹಿಂದೆ ತಾನೊಬ್ಬ ನಿರ್ದೇಶಕನಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮಂಡ್ಯದಿಂದ ಗಾಂಧಿ ನಗರಕ್ಕೆ ಕಾಲಿಟ್ಟ ಬಿ.ಜಿ.ಚಂದನ್ಕುಮಾರ್ ವಿತರಕನಾಗಿ ಕಾರ್ಯನಿರ್ವಹಿಸುತ್ತಲೇ ಚಿತ್ರನಿರ್ಮಾಣದ ಎಲ್ಲಾ ಆಯಾಮಗಳನ್ನು ಅರಿತುಕೊಂಡು ಇದೀಗ ನಿರ್ದೇಶಕನಾಗುತ್ತಿದ್ದಾರೆ.
ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರವನ್ನು ಜನರಿಗೆ ಹೇಗೆ ತಲುಪಿಸಬೇಕೆಂಬುದು ಸಹ ಗೊತ್ತಿರಬೇಕು ಎಂಬುದನ್ನು ಅರಿತಿರುವ ಚಂದನ್ಕುಮಾರ್ ದಶಕದ ಹಾದಿಯಲ್ಲಿ ಕಥೆ ಬರೆಯುವುದರಿಂದ ಹಿಡಿದು ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದನ್ನು ಚೆನ್ನಾಗಿಯೇ ತಿಳಿದುಕೊಂಡೇ ನಿರ್ದೇಶನಕ್ಕಿಳಿದಿದ್ದಾರೆ.
ಅವರ ಹೊಸ ಚಿತ್ರದ ಶೀರ್ಷಿಕೆ “ಜನ”. ಈ ಚಿತ್ರದ ಮುಹೂರ್ತ ಸಮಾರಂಭ ದೇವಯ್ಯ ಪಾರ್ಕ್ ಬಳಿಯ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ದೇಶಕರ ತಂದೆ ಗೋವಿಂದರಾಜ್ ಅವರು ಕ್ಲಾಪ್ ಮಾಡಿದರೆ, ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು.