ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್ಗಳು ಮುರಿದು ಬಿದ್ದು ನಾಲ್ವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ನಿಂದ ಮಂಟೂರ ರಸ್ತೆಯ ಅಕ್ಕಪಕ್ಕ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ಕಾಂಗ್ರೆಸ್ ನಾಯಕರ ಬೃಹತ್ ಕಟೌಟ್ ಅಳವಡಿಸಲಾಗಿತ್ತು. ಸಿಎಂ ಮತ್ತು ಸಚಿವ ಜಮೀರ್ ಅವರ ಕಟೌಟ್ಗಳು ಮುರಿದು ಬಿದ್ದು ಅದರ ಕೆಳಗಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಾಯಗೊಂಡವರಲ್ಲಿ ಓರ್ವ ಮಹಿಳೆಯನ್ನ ಶಾರದಾ ಕ್ಯಾರಕಟ್ಟಿ ಎಂದು ಗುರುತಿಸಲಾಗಿದೆ. ಶಾರದಾ ಹುಬ್ಬಳ್ಳಿ ಗಂಗಾಧರ ನಗರದ ಸೆಟಲ್ಮೆಂಟ್ ಬಡಾವಣೆಯ ಮಹಿಳೆ, ಮನೆ ಕೇಳಲೆಂದು ಮಗ ಶಶಿಕಾಂತ ಕ್ಯಾರಕಟ್ಟಿ ಜೊತೆಗೆ ಬಂದಿದ್ದರು. ಕಟೌಟ್ ಬೀಳುತ್ತಿದ್ದ ವೇಳೆ ಮಗ ಶಶಿಕಾಂತ್ ತಪ್ಪಿಸಿಕೊಂಡಿದ್ದಾನೆ. ತಾಯಿಗೆ ಕಟೌಟ್ ತಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನ) ಯಡಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ ೧,೮೦,೨೫೩ ಮನೆಗಳ ಪೈಕಿ ೨ನೇ ಹಂತದ ೪೨,೩೪೫ ಮನೆಗಳ ಲೋಕಾರ್ಪಣೆ ಕಾರ್ಯಕ್ರಮ ಜನವರಿ ೨೪ ರಂದು ನಡೆಯಲಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ವಸತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಮಂಡಳಿಯು ರಾಜ್ಯಾದ್ಯಂತ ಬರುವ ಮಹಾನಗರ, ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ ಮಂಡಳಿಯ ಕಾಯ್ದೆಯನ್ವಯ ಘೋಷಣೆ ಹೊರಡಿಸಲಾಗುತ್ತಿದೆ.
ಇಲ್ಲಿಯವರೆಗೆ ಒಟ್ಟು ೩೦೨೫ ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೨೮೬೬ ಪ್ರದೇಶಗಳನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲಾಗಿದ್ದು, ಸದರಿ ಕೊಳಗೇರಿ ಪ್ರದೇಶಗಳಲ್ಲಿ ಮಂಡಳಿ ವತಿಯಿಂದ ಕೊಳಗೇರಿ ಸುಧಾರಣೆ ಯೋಜನೆಯಡಿ ಮೂಲಭೂತ ಸೌಲಭ್ಯ & ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.
ಸಿಎಂ ಭಾಗಿಯಾಗಬೇಕಿದ್ದ ಕಾರ್ಯಕ್ರಮದಲ್ಲಿ ಅವಘಡ ಕಟೌಟ್ ಕುಸಿದು ಬಿದ್ದು ಮೂವರಿಗೆ ಗಂಭೀರ ಗಾಯ



