ಬೆಂಗಳೂರು: ರಾಜ್ಯ ಸರ್ಕಾರದಲ್ಲು ಹಣಕಾಸಿನ ನಿರ್ವಹಣೆಯಲ್ಲಿ ಸಮರ್ಪಕವಾಗಿರದೇ ಅದೋ-ಗತಿಯತ್ತ ಸಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯು ಕಡಿಮೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಟೀಕಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ ಆರ್ಥಿಕ ಸಂಪನ್ಮೂಲ ಸಂಗ್ರಹಣೆಯಲ್ಲಿ ನಿರೀಕ್ಷಿತ ಗೃರಿ ಸಾಧಿಸಿಲ್ಲ. ಒಂದು ಲಕ್ಷ ಅರವತ್ತುಮೂರು ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹ ಮಾಡಲಾಗುವುದು ಎಂದು ಹೇಳಲಾಗಿತ್ತು. ಸುಮಾರು 20 ಸಾವಿರ ಕೋಟಿಯಷ್ಟು ಕಡಿಮೆಯಾಗಿದೆ ಎಂದರು.
ಸಾಮಾಜಿಕ ವಲಯ ಸೇರಿದಂತೆ ವಲಯವಾರು ವೆಚ್ಚ ಮಾಡುವಲ್ಲಿಯೂ ಕಡಿತ ಉಂಟಾಗಿದೆ. ಪರಿಶಿಷ್ಟ ಸಮುದಾಯಗಳು, ಹಿಂದುಳಿದ ವರ್ಗಗಳು ಮಹಿಳೆಯರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಖರ್ಚು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಒಂದು ಲಕ್ಷ ಐದು ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದ ಸಾಲ ಮಾಡಲು ಉದ್ದೇಶಿಸಿರುವುದು ಒಂದು ದಾಖಲೆಯಾಗಿದೆ ಎಂದು ವಿಶ್ಲೇಷಿಸಿದರು.
ಸಾಲ ಪಡೆಯದಿದ್ದರೆ, ಪ್ರಗತಿ ಸಾಧ್ಯವಿಲ್ಲ ಎಂಬ ಮಾತನ್ನು ಒಪ್ಪಬಹುದಾದರೂ ಸಾಲದ ಮೊತ್ತವನ್ನು ರೆವೆನ್ಯು ವೆಚ್ಚಕ್ಕೆ ಬಳಸಿಕೊಂಡಿರುವುದರಿಂದ ಪ್ರಗತಿ ಹೇಗೆ ಸಾಧ್ಯ? ವಿದೇಶಿ ನೇರ ಬಂಡವಾಳ ಹೂಡಿಕೆ ವಿಚಾರದಲ್ಲಿ ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ, ಈಗಿನ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿದ್ದ 30ಕ್ಕೂ ಹೆಚ್ಚು ಐಟಿಬಿಟಿ ಕಂಪನಿಗಳು ಸಿಂಗಾಪೂರ್ ಸೇರಿದಂತೆ ಅನ್ಯರಾಜ್ಯಗಳತ್ತ ಹೋಗಿವೆ ಎಂದರು.