ಹಾಸನ: ಪ್ರಸಿದ್ಧ ಹಾಸನಾಂಬೆ ಆಶೀರ್ವಾದಕ್ಕೆ ಜನ ಸಾಗರವೇ ಹರಿದುಬರುತ್ತಿದೆ. ನವೆಂಬರ್ 3ರಿಂದಲೇ 12 ದಿನ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನೋತ್ಸವ ಆರಂಭಗೊಂಡಿದ್ದು, ಹಾಸನಾಂಬೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಇನ್ನು ಏಳು ದಿನಗಳ ದರ್ಶನದ ಅಂತ್ಯಕ್ಕೆ ಹಾಸನಾಂಬೆ ದೇಗುಲಕ್ಕೆ ಒಟ್ಟು 3 ಕೋಟಿ 18ಲಕ್ಷದ 30 ಸಾವಿರ ರೂ. ಆದಾಯ ಹರಿದುಬಂದಿದೆ.
ಇದು ಕೇವಲ ನವೆಂಬರ್ 3ರಿಂದ ನವೆಂಬರ್ 10ರ ವರೆಗೆ ಅಂದರೆ ಏಳೇ ದಿನಗಳಲ್ಲಿ ಸಂಗ್ರಹವಾದ ಹಣ. ಇನ್ನೂ ನಾಲ್ಕು ದಿನ ಬಾಕಿ ಇರುವಾಗಲೇ ಕೋಟಿ ಕೋಟಿ ರೂ. ಆದಾಯ ಸಂಗ್ರಹವಾಗಿದೆ. ವಿಶೇಷ ದರ್ಶನದ ಪಾಸ್, ಲಡ್ಡು ಮಾರಾಟದಿಂದ ಆದಾಯದಲ್ಲಿ ಹೆಚ್ಚಳವಾಗಿದೆ. ಇನ್ನು ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.
1 ಸಾವಿರ ರೂಪಾಯಿ ಮೌಲ್ಯದ ಟಿಕೆಟ್ ಮಾರಾಟದಿಂದ 1ಕೋಟಿ 35 ಲಕ್ಷದ 81 ಸಾವಿರ ರೂಪಾಯಿ ಜಮೆಯಾಗಿದ್ದರೆ, 300 ರೂ.ಟಿಕೆಟ್ ಮಾರಾಟದಿಂದ 1 ಕೋಟಿ 43ಲಕ್ಷದ 33 ಸಾವಿರ ರೂ. ಸಂಗ್ರಹವಾಗಿದೆ. ಇನ್ನು ಲಡ್ಡು ಪ್ರಸಾದ ಮಾರಾಟದಿಂದ 39 ಲಕ್ಷದ 16 ಸಾವಿರ ರೂ. ಹಣ ಸಂಗ್ರಹವಾಗಿದೆ.
ಇದರೊಂದಿಗೆ ನವೆಂಬರ್ 3ರಿಂದ ನವೆಂಬರ್ 10ರ ವರೆಗೆ 3,18,30,320 ರೂ.(3 ಕೋಟಿ 18 ಲಕ್ಷದ 30 ಸಾವಿರ ರೂ.) ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಆದಾಯ ಹರಿಬಂದಿದೆ.