ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯವು ಫೆಬ್ರವರಿ 23 ರಿಂದ ಶುರುವಾಗಲಿದೆ. ರಾಂಚಿಯ ಎSಅಂ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಹೀಗಾಗಿ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ಇದೀಗ 4ನೇ ಪಂದ್ಯಕ್ಕೆ ಬಂದು ನಿಂತಿದೆ. ಮೊದಲ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಒಂದು ಜಯ ಸಾಧಿಸಿದರೆ, ಭಾರತ ತಂಡವು ಬ್ಯಾಕ್ ಟು ಬ್ಯಾಕ್ 2 ಗೆಲುವುಗಳನ್ನು ದಾಖಲಿಸಿದೆ. ಈ ಗೆಲುವುಗಳೊಂದಿಗೆ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ಇದೀಗ ನಾಲ್ಕನೇ ಪಂದ್ಯಕ್ಕಾಗಿ ರಾಂಚಿಯಲ್ಲಿ ವೇದಿಕೆ ಸಿದ್ಧವಾಗಿದೆ. ಆದರೆ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಅಲಭ್ಯರಾಗಿದ್ದಾರೆ. ಅವರೆಂದರೆ ಕೆಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಇತ್ತ ಮೊದಲ ಪಂದ್ಯದಲ್ಲಿ ಆಡಿದ್ದ ಕೆಎಲ್ ರಾಹುಲ್ ತೊಡೆಸಂಧು ನೋವಿನ ಸಮಸ್ಯೆಯ ಕಾರಣ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸದ ಕಾರಣ 4ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.ಇತ್ತ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿರುವ ಕಾರಣ ಅವರ ಬದಲಿಗೆ ಮುಖೇಶ್ ಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದೆಡೆ ಕಳೆದ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರಜತ್ ಪಾಟಿದಾರ್ ಸಂಪೂರ್ಣ ವಿಫಲರಾಗಿದ್ದಾರೆ. ಒಟ್ಟು 4 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಪಾಟಿದಾರ್ ಕಲೆಹಾಕಿರುವುದು ಕೇವಲ 46 ರನ್ಗಳು ಮಾತ್ರ. ಹೀಗಾಗಿ 4ನೇ ಟೆಸ್ಟ್ ಪಂದ್ಯದಿಂದ ಅವರನ್ನು ಕೈ ಬಿಡುವ ಸಾಧ್ಯತೆಯಿದೆ. ಅಲ್ಲದೆ ಅವರ ಬದಲಿಗೆ ಅಕ್ಷರ್ ಪಟೇಲ್ ಅಥವಾ ದೇವದತ್ ಪಡಿಕ್ಕಲ್ ಅವರನ್ನು ಕಣಕ್ಕಿಳಿಸಬಹುದು.
ಈ ಎರಡು ಬದಲಾವಣೆಯೊಂದಿಗೆ ಟೀಮ್ ಇಂಡಿಯಾ ರಾಂಚಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ಇಲ್ಲಿ ರಜತ್ ಪಾಟಿದಾರ್ ಬದಲಿಗೆ ಯಾರಿಗೆ ಅವಕಾಶ ಸಿಗಲಿದೆ ಎಂಬುದೇ ಈಗ ಕುತೂಹಲ.