ಮಧ್ಯಮ ವೇಗಿ ಮೊಹಮದ್ ಶಮಿ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ 55 ರನ್ ಗಳಿಗೆ ಆಲೌಟಾಗಿದೆ. ಭಾರತ ತಂಡ 302 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಅಗ್ರಸ್ಥಾನಿಗೆ ಪ್ರವೇಶಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೂವರು ಗಳಿಸಿದ ಅರ್ಧಶತಕದ ನೆರವಿನಿಂದ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 357 ರನ್ ಸಂಪಾದಿಸಿತು.
ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ 19.4 ಓವರ್ ಗಳಲ್ಲಿ 55 ರನ್ ಗಳಿಗೆ ಪತನಗೊಂಡಿತು. ಮೊಹಮದ್ ಶಮಿ ವಿಶ್ವಕಪ್ ನಲ್ಲಿ 4 ಬಾರಿ 5 ವಿಕೆಟ್ ಗೊಂಚಲು ಪಡೆಯುವ ಮೂಲಕ ಭಾರತದ ಜಾವಗಲ್ ಶ್ರೀನಾಥ್ ದಾಖಲೆಯನ್ನು ಮುರಿದರು.
ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ಶ್ರೀಲಂಕಾ ಪರ ಆಂಜೆಲೊ ಮ್ಯಾಥ್ಯೂಸ್ 12 ರನ್ ಗಳಿಸಿದ್ದರೆ, ಕಸೌನ್ ರಂಜಿತಾ 14, ಮಹೇಶ್ ತೀಕ್ಷಣ 12 ರನ್ ಬಾರಿಸಿದರೆ ಉಳಿದವರು ಎರಡಂಕಿಯ ಮೊತ್ತ ದಾಖಲಿಸಲು ವಿಫಲರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದರೂ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್ ಗೆ 189 ರನ್ ಜೊತೆಯಾಟ ನಿಭಾಯಿಸಿದರು.
ಗಿಲ್ 92 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 92 ರನ್ ಗಳಿಸಿದರೆ, ಕೊಹ್ಲಿ 94 ಎಸೆತಗಳಲ್ಲಿ 11 ಬೌಂಡರಿ ಸಹಾಯದಿಂದ 88 ರನ್ ಸಿಡಿಸಿದರು. ಇವರಿಬ್ಬರು ಒಬ್ಬರ ಹಿಂದೆ ಒಬ್ಬರಂತೆ ಔಟಾಗಿ ಶತಕದ ಗೌರವದಿಂದ ವಂಚಿತರಾದರು.