ಏಕದಿನ ಕ್ರಿಕೆಟ್ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಿನ್ನೆ ನಡೆದ 4ನೇ ಟಿ-20 ಪಂದ್ಯದಲ್ಲಿ 20 ರನ್ ಗಳಿಂದ ಗೆಲುವು ಸಾಧಿಸಿದ ಭಾರತ ಸರಣಿಯನ್ನು 3-1 ಅಂತರದಿಂದ ಗೆದ್ದು ಬೀಗಿದೆ. ರಾಯಪುರ: ಏಕದಿನ ಕ್ರಿಕೆಟ್ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ 4ನೇ ಟಿ-20 ಪಂದ್ಯದಲ್ಲಿ 20 ರನ್ ಗಳಿಂದ ಗೆಲುವು ಸಾಧಿಸಿದ ಭಾರತ ಸರಣಿಯನ್ನು 3-1 ಅಂತರದಿಂದ ಗೆದ್ದು ಬೀಗಿದೆ.
ಹೌದು. ಇಲ್ಲಿನ ಇಲ್ಲಿನ ಶಹೀದ್ ವೀರ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಭಾರತ ಪರ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ 37, ಋತುರಾಜ್ ಗಾಯಕ್ವಾಡ್ 32 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ನಂತರ ಬಂದ ಶ್ರೇಯಸ್ ಅಯ್ಯರ್ ಮತ್ತೆ ಕೇವಲ 8 ರನ್ ಗಳಿಸಿ ವೈಫಲ್ಯ ಕ್ಕೊಳಗಾದರು.
ನಾಯಕ ಸೂರ್ಯ ಕುಮಾರ್ ಯಾದವ್ ಕೇವಲ 1 ರನ್ ಗಳಿಗೆ ಔಟಾಗಿ ಫೆವಿಲಿಯನ್ ಸೇರಿದರು.ರಿಂಕ್ ಸಿಂಗ್ ಇಲ್ಲಿಯೂ ಭರ್ಜರಿ ಪ್ರದರ್ಶನ ನೀಡಿದರು. 29 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಿಡಿಸಿ 46 ರನ್ ಗಳಿಸಿದರು, ಜಿತೇಶ್ ಶರ್ಮಾ 35, ರವಿ ಬಿಷ್ಣೋಯಿ 4 ರನ್ ಗಳಿಸುವುದರೊಂದಿಗೆ ಭಾರತ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಭಾರತ ನೀಡಿದ 175 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟೇಲಿಯಾ ಪರ ಟ್ರಾವಿಸ್ ಹೇಡ್ 31,ಜೋಸ್ ಫಿಲ್ಲಿಪ್ 8, ಬೆನ್ ಮ್ಯಾಕ್ ಡರ್ಮೊಟ್ 19, ಟಿಮ್ ಡೇವಿಡ್ 19, ಮ್ಯಾಥ್ಯೂ ಶಾರ್ಟ್ 22, ಮ್ಯಾಥ್ಯೂ ವಾಡೆ 36 ರನ್ ಗಳಿಸಿದರು.
ಉಳಿದ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಭಾರತ 20 ರನ್ ಗಳೊಂದಿಗೆ ಗೆಲುವು ಸಾಧಿಸಿತು. 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು.