ಮುಂಬೈ: ಮಂಗಳವಾರದ ಭಾರತ- ಆಸ್ಟ್ರೇಲಿಯ ವನಿತಾ ಏಕದಿನ ಪಂದ್ಯದ ಮೂಲಕ 2024ರ ಕ್ರಿಕೆಟ್ ಋತು ಆರಂಭವಾಗಲಿದೆ. ಇದು ಸರಣಿಯ 3ನೇ ಹಾಗೂ ಅಂತಿಮ ಪಂದ್ಯ.ಮೊದಲೆರಡೂ ಮುಖಾಮುಖಿಗಳಲ್ಲಿ ಸೋಲನುಭವಿಸಿ ಸರಣಿ ಕಳೆದುಕೊಂಡಿರುವ ಹರ್ಮನ್ ಪ್ರೀತ್ ಕೌರ್ ಬಳಗಕ್ಕೆ ಇದು ಪ್ರತಿಷ್ಠೆಯ ಪಂದ್ಯ.
ವರ್ಷಾರಂಭದಲ್ಲೇ ವೈಟ್ವಾಶ್ ಅವಮಾನದಿಂದ ಪಾರಾಗಬೇಕಾದ ವಿಪರೀತ ಒತ್ತಡ ವನಿತಾ ತಂಡದ ಮೇಲಿದೆ.
ಎರಡು ಟೆಸ್ಟ್ ಪಂದ್ಯಗಳಲ್ಲಿ ಐತಿಹಾಸಿಕ ಫಲಿತಾಂಶ ದಾಖಲಿಸಿದ ಭಾರತ, ಏಕದಿನದಲ್ಲಿ ಹಳಿ ತಪ್ಪಿದೆ. ಮೊದಲ ಪಂದ್ಯವನ್ನು 8 ವಿಕೆಟ್ಗಳಿಂದ, ದ್ವಿತೀಯ ಮುಖಾಮುಖಿಯನ್ನು ಕೇವಲ 3 ರನ್ನುಗಳಿಂದ ಸೋತು ಒತ್ತಡಕ್ಕೆ ಸಿಲುಕಿದೆ. ಅಂತಿಮ ಪಂದ್ಯವನ್ನಾದರೂ ಗೆದ್ದು ಪೂರ್ತಿ ಮುಖಭಂಗದಿಂದ ಪಾರಾಗಬೇಕಿದೆ.
ಸಾಮರ್ಥ್ಯಕ್ಕೆ ತಕ್ಕ ಆಟ:ಆಸ್ಟ್ರೇಲಿಯ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಹೀಗಾಗಿಯೇ ಇರಬೇಕು, 2007ರ ಫೆಬ್ರವರಿಯಿಂದ ಭಾರತದ ವಿರುದ್ಧ ಆಸೀಸ್ ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿಲ್ಲ.