ಬ್ರಿಜ್ಟೌನ್, ಬಾರ್ಬಾಡೋಸ್: ಸೂರ್ಯಕುಮಾರ್ ಯಾದವ್ ಆರ್ಭಟ ಮತ್ತು ಜಸ್ಪ್ರೀತ್ ಬೂಮ್ರಾ ನಿಖರ ದಾಳಿಯ ಬಲದಿಂದ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದಲ್ಲಿ ಶುಭಾರಂಭ ಮಾಡಿತು. ಕೆನ್ಸಿಂಗ್ಟನ್ ಒವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಒಂದನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 47 ರನ್ಗಳಿಂದ ಅಫ್ಗಾನಿಸ್ತಾನ ವಿರುದ್ಧ ಜಯಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಆರಂಭದಲ್ಲಿ ಆತಂಕ ಎದುರಿಸಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ (53; 28ಎ, 4ಘಿ5, 6ಘಿ3) ಮಿಂಚಿನ ಬ್ಯಾಟಿಂಗ್ನಿಂದಾಗಿ ಆತಂಕ ದೂರವಾಯಿತು. ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 181 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ ತಂಡವು ಬೂಮ್ರಾ (4-1-7-3) ದಾಳಿಗೆ ಶರಣಾಯಿತು.
20 ಓವರ್ಗಳಲ್ಲಿ 134 ರನ್ ಗಳಿಸಿ ಶರಣಾಯಿತು. ಗುಲ್ಬದೀನ್ ನೈಬ್ (17 ರನ್), ಅಜ್ಮತ್ಉಲ್ಲಾ ಒಮರ್ಝೈ (26 ರನ್) ಹಾಗೂ ನಜೀಬುಲ್ಲಾ ಜದ್ರಾನ್ (19 ರನ್) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಬೂಮ್ರಾ ಅವರಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ (36ಕ್ಕೆ3) ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ (32ಕ್ಕೆ2) ಉತ್ತಮ ಜೊತೆ ನೀಡಿದರು. ಇದರಿಂದಾಗಿ ಅಫ್ಗನ್ ತಂಡದ ಬ್ಯಾಟಿಂಗ್ ಪಡೆ ಕುಸಿಯಿತು.