ಅಮೃತಸರ: ಭಾರತದಲ್ಲಿ 2029ರ ವಿಶ್ವ ಅಥ್ಲೆಟಿಕ್ಸ್ ಕೂಟ ಆಯೋಜನೆಗಾಗಿ ಬಿಡ್ ಸಲ್ಲಿಸಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ನಿರ್ಧರಿಸಿದೆ.
ಫೆಡರೇಷನ್ ಈ ಹಿಂದೆ 2027ರ ವಿಶ್ವ ಅಥ್ಲೆಟಿಕ್ ಕೂಟದ ಆಯೋಜನೆಗೆ ಬಿಡ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈಗ ಅದರಿಂದ ಹಿಂದೆಸರಿದು, ನಂತರದ ಆವೃತ್ತಿಯನ್ನು ಆಯೋಜಿಸುವತ್ತ ಉತ್ಸಾಹ ತೋರಿದೆ.
`ಹೌದು. 2029ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಬಿಡ್ ಹಾಕಲು ಆಸಕ್ತಿ ಹೊಂದಿದ್ದೇವೆ’ ಎಂದು ಎಎಫ್ಐ ವಾರ್ಷಿಕ ಮಹಾಸಭೆಯ ಬಳಿಕ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ತಿಳಿಸಿದರು.
`2036ರ ಒಲಿಂಪಿಕ್ಸ್ ಮತ್ತು 2030ರ ಯೂತ್ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಲು ಭಾರತವು ಆಸಕ್ತಿ ತೋರಿದೆ. ಆದ್ದರಿಂದ, 2029ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಿದರೆ ಉತ್ತಮ’ ಎಂದರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಕೊನೆಯ ಆವೃತ್ತಿಯು ಆಗಸ್ಟ್ನಲ್ಲಿ ಹಂಗರಿಯ ಬುಡಾಪೆಸ್ಟ್ನಲ್ಲಿ ನಡೆಯಿತು ಮತ್ತು ಮುಂದಿನ ಕೂಟ 2025ರಲ್ಲಿ ಟೋಕಿಯೊದಲ್ಲಿ ನಡೆಯಲಿದೆ.