ಬ್ಯಾಂಕಾಕ್: ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಭಾರತ ಮಹಿಳಾ ತಂಡದ ಅದಿತಿ ಸ್ವಾಮಿ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರಣೀತ್ ಕೌರ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಚರಿ (ಬಿಲ್ಗಾರಿಕೆ) ಚಾಂಪಿಯನ್ಷಿಪ್ನ ಕಾಂಪೌಂಡ್ ವಿಭಾಗದ ರ್ಯಾಂಕಿಂಗ್ ಸುತ್ತಿನಲ್ಲಿ ಭಾರತಕ್ಕೆ ಅಗ್ರಸ್ಥಾನವನ್ನು ಸೋಮವಾರ ಖಚಿತಪಡಿಸಿಕೊಂಡರು.
ವಿಶ್ವ ಚಾಂಪಿಯನ್ ಅದಿತಿ 706 ಪಾಯಿಂಟ್ಸ್ ಸಂಗ್ರಹಿಸಿ ಮೊದಲಿಗ ರಾದರೆ, ಹಾಂಗ್ಝೌ ಕ್ರೀಡೆಗಳಲ್ಲಿ ಮೂರು ಚಿನ್ನ ಗೆದ್ದುಕೊಂಡ ಜ್ಯೋತಿ 700 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನ ಪಡೆದರು. ಪ್ರಣೀತ್ ಕೌರ್ ಒಂದು ಪಾಯಿಂಟ್ ಹಿಂದೆಬಿದ್ದು ನಾಲ್ಕನೇ ಸ್ಥಾನ ಪಡೆದರು. ತಂಡ 2105 ಪಾಯಿಂಟ್ಗಳೊಡನೆ ಒಂದನೇ ಕ್ರಮಾಂಕ ಖಚಿತಪಡಿಸಿಕೊಂಡಿತು. ಕೊರಿಯಾ (2701) 2ನೇ ಸ್ಥಾನ ಗಳಿಸಿತು.
ಭಾರತ ತಂಡ ಎಂಟು ತಂಡಗಳ ಸುತ್ತಿನ ಎಲಿಮಿನೇಷನ್ ಸುತ್ತಿನಲ್ಲಿ ತಳದಲ್ಲಿರುವ ಹಾಂಗ್ಕಾಂಗ್ ವಿರುದ್ಧ ಅಭಿಯಾನ ಆರಂಭಿಸಲಿದೆ.
ದಕ್ಷಿಣ ಕೊರಿಯಾ ತಂಡ (2128) ಪುರುಷರ ಕಾಂಪೌಂಡ್ ಟೀಮ್ ವಿಭಾಗದಲ್ಲಿ ಭಾರತ ತಂಡವನ್ನು ಒಂದು ಪಾಯಿಂಟ್ನಿಂದ ಸೋಲಿಸಿ ಅಗ್ರಕ್ರಮಾಂಕ ಪಡೆದುಕೊಂಡಿತು. ಇಲ್ಲಿ 16 ತಂಡಗಳಿರುತ್ತವೆ. ಭಾರತ ಬೈ ಪಡೆದಿದ್ದು, ನೇರವಾಗಿ ಕ್ವಾರ್ಟರ್ಫೈನಲ್ನಲ್ಲಿ ಸೆಣಸಾಟದಲಿದೆ. ಅಲ್ಲಿ ಏಳನೇ ಶ್ರೇಯಾಂಕದ ವಿಯೆಟ್ನಾಂ ಎದುರಾಳಿ.
ಪ್ರಿಯಾನ್ಷ್ (710) ಮತ್ತು ಪ್ರಥಮೇಶ್ (709) ಭಾರತದ ಪರ ಮೊದಲ ಎರಡು ಸ್ಥಾನ ಪಡೆದರು. ಅವರು ದಕ್ಷಿಣ ಕೊರಿಯಾದ ಯಾಂಗ್ ಜೇವೊನ್ ನಂತರ ಎರಡು ಮತ್ತು ಮೂರನೇ ರ?ಯಾಂಕಿಂಗ್ ಪಡೆದಿದ್ದರು.ಮಹಿಳೆಯರ ರಿಕರ್ವ್ ಕ್ವಾಲಿಫಿಕೇಷನ್ ಸುತ್ತಿನಲ್ಲಿ ಭಾರತ ಐದನೇ ಸ್ಥಾನ (1947 ಪಾಯಿಂಟ್ಸ್) ಪಡೆಯಿತು.