ದೊಡ್ಡಬಳ್ಳಾಪುರ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ‘ಮಾಂಗಲ್ಯ ಭಾಗ್ಯ ಎಂಬ ಯೋಜನೆಯಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು 2024ರ ಜನವರಿ 31ರ ಬೆಳಗ್ಗೆ 11:20 ರಿಂದ 12:20ರವರೆಗೆ ಅಭಿಜಿನ್ ಲಗ್ನದಲ್ಲಿ ಆಯೋಜಿಸಲಾಗಿದೆ.
ಮಾಂಗಲ್ಯ ಭಾಗ್ಯದ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ 5 ಸಾವಿರ ಹಾಗೂ ವಧುವಿಗೆ 10 ಸಾವಿರ ಸೇರಿದಂತೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಹೀಗೆ ಒಟ್ಟು 55 ಸಾವಿರ ರೂ.ಗಳನ್ನ ದೇವಾಲಯದ ವತಿಯಿಂದ ಭರಿಸಲಾಗುವುದು.
ಈ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಸಹ ದೇವಾಲಯ ವತಿಯಿಂದ ಮಾಡಲಾಗುವುದು.ಮಾಂಗಲ್ಯ ಭಾಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಅರ್ಜಿಯನ್ನು ದೇವಾಲಯದ ಕಾರ್ಯನಿರ್ವಾಹ ಕಚೇರಿಯಲ್ಲಿ ಪಡೆದು ಜನವರಿ 20ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ ನೋಂದಾಸಿಕೊಳ್ಳಬೇಕಾಗಿದೆ.
ನೋಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ಜನವರಿ 23ರಂದು ದೇವಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ವಧು-ವರರ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಜ. 25ರೊಳಗಾಗಿ ಸಲ್ಲಿಸಬೇಕಾಗಿದೆ. ಅಂತಿಮ ವಧು-ವರರ ಪಟ್ಟಿಯನ್ನ ಜ.27ರಂದು ಪ್ರಕಟಿಸಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9590300410, 9241297450, 9980907997ನ್ನು ಸಂಪರ್ಕಿಸಬಹುದಾಗಿದೆ.