ಚಾಮರಾಜನಗರ: ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ಹನೂರು ತಾಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಹೊರ ಆವರಣ, ಶಸ್ತ್ರಚಿಕಿತ್ಸಾ ಕೊಠಡಿ, ಔಷಧಾಲಯ ಹಾಗೂ ವಾರ್ಡುಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು.ಆಸ್ಪತ್ರೆಗೆಇನ್ನೂ ಯಾವ ಯಾವ ಸೌಲಭ್ಯಗಳು ಅಗತ್ಯವಿದೆ ಎಂಬ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಇದೇ ವೇಳೆ ಸ್ಥಳೀಯ ಜನರಿಂದ ಅಹವಾಲುಗಳನ್ನು ಸಚಿವರು ಆಲಿಸಿದರು. ರಸ್ತೆ, ಆಸ್ಪತ್ರೆ, ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಇತರರು ಇದ್ದರು.